ಕೊರೋನ ಸೋಂಕಿಗೊಳಗಾದ ನಟ ಅಕ್ಷಯ್ ಕುಮಾರ್ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ, ಎ. 5: ಕೋವಿಡ್ ಪರೀಕ್ಷೆಯಲ್ಲಿ ಪಾಸಿಟವ್ ಬಂದಿದೆ ಎಂದು ಘೋಷಿಸಿದ ಒಂದು ದಿನದ ಬಳಿಕ ನಟ ಅಕ್ಷಯ್ ಕುಮಾರ್ ತಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಸೋಮವಾರ ಟ್ವೀಟ್ ಮಾಡಿದ್ದಾರೆ. ತಾನು ಆರೋಗ್ಯವಾಗಿದ್ದೇನೆ.
ಆದರೆ, ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಅಕ್ಷಯ್ ಕುಮಾರ್ ಅವರು ತಿಳಿಸಿದ್ದಾರೆ. ‘‘ಗುಣಮುಖರಾಗುವಂತೆ ಹಾರೈಸಿದ ಹಾಗೂ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಆರೋಗ್ಯವಾಗಿದ್ದೇನೆ. ಆದರೆ, ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ.
ನಾನು ಶೀಘ್ರದಲ್ಲಿ ಮನೆಗೆ ಹಿಂದಿರುಗುತ್ತೇನೆ ಎಂಬ ಭರವಸೆ ಇದೆ’’ ಎಂದು ಅವರು ಬರೆದಿದ್ದಾರೆ. ಅಕ್ಷಯ್ ಕುಮಾರ್ ಅವರು ರವಿವಾರ ‘‘ನನಗೆ ಕೊರೋನ ಸೋಂಕು ತಗುಲಿದೆ ಎಂದು ಪ್ರತಿಯೊಬ್ಬರಿಗೂ ಮಾಹಿತಿ ನೀಡಲು ಬಯಸುತ್ತೇನೆ. ನಾನು ಶಿಷ್ಟಾಚಾರಗಳ ಹಿನ್ನೆಲೆಯಲ್ಲಿ ಕೂಡಲೇ ಸ್ವಯಂ ಐಸೋಲೇಷನ್‌ಗೆ ಒಳಗಾದೆ. ನಾನು ಹೋಮ್ ಕ್ವಾರಂಟೈನ್‌ನಲ್ಲಿ ಇದ್ದೇನೆ ಹಾಗೂ ಅಗತ್ಯದ ವೈದ್ಯಕೀಯ ಚಿಕಿತ್ಸೆಯನ್ನು ಕೋರಿದ್ದೇನೆ. ನನ್ನೊಂದಿಗೆ ಸಂಪರ್ಕ ಇರಿಸಿಕೊಂಡವರು ಕೊರೋನ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ’’ ಎಂದು ಬರೆದಿದ್ದರು.