ಒಂಟಿ ಮಹಿಳೆ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ: ಮಮತಾರನ್ನು ಹೊಗಳಿದ ಜಯಾ ಬಚ್ಚನ್

ಕೋಲ್ಕತಾ: ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ಪಶ್ಚಿಮಬಂಗಾಳಕ್ಕೆ ಆಗಮಿಸಿರುವ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಸೋಮವಾರ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಏಕಾಂಗಿ ಹೋರಾಟವನ್ನು ಕೊಂಡಾಡಿದರು.
ಮಮತಾ ಬ್ಯಾನರ್ಜಿ ಅವರು ಪ್ರತಿ ಬಂಗಾಳಿಯ ಪ್ರಜಾಪ್ರಭುತ್ವದ ಹಕ್ಕನ್ನು ಕಾಪಾಡಲು ಹೋರಾಡುತ್ತಿದ್ದಾರೆ ಎಂದು ಮತದಾರರಿಗೆ ನೆನಪಿಸಿದ ಜಯಾ ಬಚ್ಚನ್, ಧರ್ಮ ಹಾಗೂ ಪ್ರಜಾಪ್ರಭುತ್ವ ಹಕ್ಕುಗಳನ್ನು ಅಪಹರಿಸುವವರ ವಿರುದ್ದ ಎದುರಾಳಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಆದರೆ ಅವರು ಯಾವುದೇ ಪಕ್ಷದ ಹೆಸರನ್ನು ಹೇಳಲಿಲ್ಲ.
"ಮಮತಾಜಿಯ ಬಗ್ಗೆ ನನಗೆ ಅತ್ಯಂತ ಪ್ರೀತಿ ಮತ್ತು ಗೌರವವಿದೆ. ಒಂಟಿ ಮಹಿಳೆ ಎಲ್ಲ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿದ್ದಾರೆ. ಒಂಟಿ ಮಹಿಳೆ ಎಲ್ಲರ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಕಾಲು ಮುರಿದಿದೆ, ಆದರೆ ಇದು ಅವರ ಹೋರಾಟವನ್ನು ತಡೆದಿಲ್ಲ" ಎಂದು ಬಂಗಾಳದಲ್ಲಿ ಜನಿಸಿರುವ ಹಾಗೂ ಉತ್ತರ ಪ್ರದೇಶದಿಂದ ನಾಲ್ಕು ಅವಧಿಗೆ ರಾಜ್ಯಸಭಾ ಸಂಸದರಾಗಿರುವ ಜಯಾ ಬಚ್ಚನ್ ಹೇಳಿದರು.
“ನನ್ನ ಧರ್ಮವನ್ನು ನನ್ನಿಂದ ಅಪಹರಿಸಬೇಡಿ ಹಾಗೂ ನನ್ನ ಪ್ರಜಾಪ್ರಭುತ್ವ ಹಕ್ಕುಗಳನ್ನು ನನ್ನಿಂದ ಅಪಹರಿಸಬೇಡಿ ಎಂದು ಹೇಳಲು ನಾನು ಹೇಳಲು ಬಯಸುತ್ತೇನೆ. ನಾನು ಎಲ್ಲ ಜನರನ್ನು ಪ್ರತಿನಿಧಿಸುತ್ತೇನೆ'' ಎಂದು ಬಚ್ಚನ್ ಹೇಳಿದರು.







