ನನ್ನನ್ನು ಸೇರಿದಂತೆ ಎಲ್ಲಾ ರಾಜಕಾರಣಿಗಳು ನೈತಿಕತೆ ಕಳೆದುಕೊಳ್ಳೂತ್ತಿದ್ದಾರೆ: ಮುಖ್ಯಮಂತ್ರಿ ಚಂದ್ರು

ಮೈಸೂರು, ಎ.5: ಪ್ರಸ್ತುತ ರಾಜಕೀಯ ವ್ಯವಸ್ಥೆ ಕುಲಗೆಟ್ಟು ಹೋಗಿದ್ದು, ನನ್ನನ್ನು ಸೇರಿದಂತೆ ಎಲ್ಲಾ ರಾಜಕಾರಣಿಗಳು ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾನಾಡಿದ ಅವರು, ಇಂದಿನ ರಾಜಕಾರಣಿಗಳು ಮೌಲ್ಯಯುತ ರಾಜಕಾರಣ ಮಾಡದೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ವಕುಟಂಬ ಅಭಿವೃದ್ಧಿಯಲ್ಲೇ ತೊಡಗಿದ್ದಾರೆ. ರಾಜ್ಯದ ಜನರ ಅಭಿವೃದ್ಧಿಗಿಂತ ಅವರು ಮತ್ತು ಅವರ ಕುಟುಂಬದವರ ಅಭಿವೃದ್ಧಿಯನ್ನಷ್ಟೇ ಮಾಡಿಕೊಳ್ಳುತ್ತಿದ್ದಾರೆ. ನನ್ನನ್ನು ಸೇರಿದಂತೆ ಇಂದಿನ ರಾಜಕಾರಣಿಗಳು ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನಮ್ಮ ರಾಜ್ಯವನ್ನು ಆಡಳಿತ ನಡೆಸುವ ಮುಖ್ಯಮಂತ್ರಿಗೆ ಜನರ ಬಗ್ಗೆ ಕಾಳಜಿ ಇರಬೇಕು, ಆದರೆ ಇಂದಿನ ಮುಖ್ಯಮಂತ್ರಿಗಳಿಗೆ ಜನರ ಬಗೆಗಿಂತ ಅವರ ಮಕ್ಕಳ ಬಗ್ಗೆಯೇ ಹೆಚ್ಚು ಕಾಳಜಿ ಇರುತ್ತದೆ ಎಂದು ಹೇಳಿದರು.
ನಾನು ಎರಡು ಬಾರಿ ಶಾಸಕನಾಗಿ, ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನನ್ನ ಅನುಭವದಲ್ಲಿ ಮುಖ್ಯಮಂತ್ರಿ ವಿರುದ್ಧ ದೂರನ್ನು ಕೊಟ್ಟಿರುವುದನ್ನು ನೋಡಿಯೇ ಇರಲಿಲ್ಲ, ಆದರೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ದೂರನ್ನು ನೀಡಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿಗಳು ಅವರನ್ನು ಸಚಿವ ಸ್ಥಾನದಿಂದ ಕಿತ್ತಾಕುವ ಬದಲು ಇನ್ನೂ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ನಡೆ ಸರಿಯಿಲ್ಲ ಎಂದರೆ ಪಕ್ಷದ ಹೈಕಮಾಂಡ್‍ಗೆ ದೂರು ನೀಡಬೇಕು, ಇಲ್ಲ ಶಾಸಕರುಗಳ ಸಭೆ ಕರೆದು ಅವಿಶ್ವಾಸ ತರಬೇಕು, ಆದರೆ ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧವೇ ದೂರು ಕೊಟ್ಟಿರುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಕ್ಲೀನ್ ಚೀಟ್ ಪಡೆಯುತ್ತಾರೆ ಎಂದು ಮುಖ್ಯಮಂತ್ರಿಗಳೇ ಹೇಳುತ್ತಾರೆ ಎಂದರೆ ನಮ್ಮ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬು ಅರ್ಥವಾಗುತ್ತದೆ. ಸರ್ಕಾರದ ಹಿಡಿತದಲ್ಲಿರುವ ಯಾವ ಸಂಸ್ಥೆಗಳಿಂದಲೂ ನ್ಯಾಯ ಸಿಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸ್ವತಃ ಸಂತ್ರಸ್ತೆ ಯುವತಿ ಎಸ್‍ಐಟಿ ಮೇಲೆ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದರೂ ಸರ್ಕಾರ ಮಾತ್ರ ಎಸ್‍ಐಟಿ ತನಿಖೆ ಮುಂದುವರಿಸುತ್ತಿರುವುದು ದುರಂತ ಎಂದು ಹೇಳಿದರು.







