ಮತದಾರರ ಪಟ್ಟಿಯಿಂದ ನನ್ನ ಹೆಸರು ತೆಗೆಯಲಾಗಿದೆ: ಜಯಲಲಿತಾ ಆಪ್ತೆ ಶಶಿಕಲಾ ಆರೋಪ
ತಮಿಳುನಾಡು ವಿಧಾನಸಭಾ ಚುನಾವಣೆ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ಆಪ್ತೆ ವಿಕೆ ಶಶಿಕಲಾ ಅವರ ಹೆಸರನ್ನು ಅವರ ಗಮನಕ್ಕೆ ತರದೆ ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಇದು ಅನ್ಯಾಯ ಎಂದು ಶಶಿಕಲಾರ ವಕೀಲ ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದಿರುವುದಕ್ಕೆ ಶಶಿಕಲಾ ಬೇಸರಗೊಂಡಿದ್ದು, ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಯಸಿದ್ದಾರೆ ಎಂದು ಶಶಿಕಲಾರ ವಕೀಲ ಸೋಮವಾರ ಹೇಳಿದ್ದಾರೆ.
ತಮಿಳುನಾಡಿನ ವಿಧಾನಸಭಾ ಚುನಾವಣೆಯು ಮಂಗಳವಾರ ಒಂದೇ ಹಂತದಲ್ಲಿ ನಡೆಯಲಿದೆ.
ಇದರ ಹಿಂದೆ ಯಾವುದೆ ಷಡ್ಯಂತ್ರವಿಲ್ಲ. ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ಎನ್ ಡಿಟಿವಿಗೆ ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ 66ರ ವಯಸ್ಸಿನ ಶಶಿಕಲಾರ ಹೆಸರಿಲ್ಲದ ಕಾರಣ ಅವರು ಈ ಬಾರಿ ಮತದಾನ ಮಾಡುವುದರಿಂದ ವಂಚಿತರಾಗಿದ್ದಾರೆ.
ಈ ಹಿಂದೆ ಚೆನ್ನೈನ ತೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಶಶಿಕಲಾರ ಹೆಸರಿತ್ತು. ಈ ಹಿಂದೆ ಅವರು ಜಯಲಲಿತಾರ ಐಷಾರಾಮಿ ಪಾಯೆಸ್ ಗಾರ್ಡನ್ ರೆಸಿಡೆನ್ಸಿಯಲ್ಲಿ ವಾಸವಾಗಿದ್ದರು.ಇದನ್ನು ಎಐಎಡಿಎಂಕೆ ಸರಕಾರ ಸ್ಮಾರಕವನ್ನಾಗಿ ಪರಿವರ್ತಿಸಿದೆ.
ಜನವರಿಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಬಳಿಕ ತಾನು ರಾಜಕೀಯದಿಂದ ದೂರ ಉಳಿಯವುದಾಗಿ ಶಶಿಕಲಾ ಘೋಷಿಸಿದ್ದರು.