ಮಂಗಳೂರು : ಬಾಲಕ ಆಕಿಫ್ ಕೊಲೆ ಪ್ರಕರಣ; ಆರೋಪಿಯ ತಂದೆ ಸೆರೆ

ಫೈಲ್ ಫೋಟೊ
ಮಂಗಳೂರು : ಉಳ್ಳಾಲ, ಕೆಸಿನಗರದ ನಿರ್ಜನ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಬಾಲಕ ಆಕಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೀಪಕ್ ಎಂಬಾತನ ತಂದೆ ಸಂತೋಷ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಪಬ್ ಜಿ ಆಟದಲ್ಲಿ ಸೋತ ವಿಚಾರವಾಗಿ 12 ವರ್ಷದ ಬಾಲಕ ಆಕಿಫ್ ನನ್ನು ಕೊಂದ ಆರೋಪ ಹೊತ್ತಿರುವ ತನ್ನ ಪುತ್ರ ದೀಪಕ್ ನಿಗೆ ಆಶ್ರಯ ನೀಡಿದ್ದಕ್ಕಾಗಿ ಪಿಲಿಕೂರ್ನ 45 ವರ್ಷದ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆಕಿಫ್ ನನ್ನು ಹತ್ಯೆಗೈದು ನಂತರ ಮನೆಗೆ ಬಂದ ದೀಪಕ್ ತನ್ನ ತಂದೆ ಸಂತೋಷ್ ಬಳಿ ಕೊಲೆ ಕುರಿತು ಮಾಹಿತಿ ನೀಡಿದ್ದು, ಮಗನಿಗೆ ಆಶ್ರಯ ನೀಡಿದ್ದಕ್ಕಾಗಿ ಮತ್ತು ಕೊಲೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಕಾರಣ ಪೊಲೀಸರು ಆರೋಪಿಯ ತಂದೆ ಸಂತೋಷ್ ನನ್ನು ಬಂಧಿಸಿದ್ದಾರೆ. ಸಂತೋಷ್ ಲಾರಿ ಚಾಲಕನಾಗಿದ್ದು ಕಳೆದ 30 ವರ್ಷಗಳಿಂದ ತಲಪಾಡಿಯಲ್ಲಿ ವಾಸಿಸುತ್ತಿದ್ದಾರೆ.
ಕೃತ್ಯ ನಡೆದ ದಿನ ಆರೋಪಿ ದೀಪಕ್ ಮನೆಗೆ ತೆರಳಿ ವಿಚಾರಿಸಿದಾಗ ಮಗ ಎಸಗಿದ ಕೃತ್ಯದ ಬಗ್ಗೆ ಸಂತೋಷ್ ಗೆ ಮಾಹಿತಿ ಇದ್ದರೂ ಏನೂ ಗೊತ್ತಿಲ್ಲದಂತೆ ನಟಿಸಿದ್ದ, ಮಗನ ಬಟ್ಟೆಯನ್ನೂ ಬಚ್ಚಿಟ್ಟಿದ್ದ ಮತ್ತು ಯಾರಿಗೂ ಹೇಳಬೇಡ ಎಂದು ತಿಳಿಸಿದ್ದಾಗಿ ಕಮಿಷನರ್ ಶಶಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.





