ಪೈಲಟ್ ಆಗಬೇಕೆಂಬ ಕನಸು ಹೊತ್ತ ಬಾಲಕನನ್ನು ವಿಮಾನದೊಳಗೆ ಕರೆದೊಯ್ದು ಕಾರ್ಯವಿಧಾನ ವಿವರಿಸಿದ ರಾಹುಲ್ ಗಾಂಧಿ
ವೀಡಿಯೊ ವೈರಲ್

ತಿರುವನಂತಪುರ: ಪೈಲಟ್ ಆಗಬೇಕೆಂಬ ಕನಸನ್ನು ತನ್ನೊಂದಿಗೆ ಹಂಚಿಕೊಂಡ ಕೇರಳದ 9 ವರ್ಷದ ಬಾಲಕನನ್ನು ವಿಮಾನದ ಕಾಕ್ ಪಿಟ್ ನೊಳಗೆ ಕರೆದೊಯ್ದು, ವಿಮಾನದ ಕಾರ್ಯವಿಧಾನವನ್ನು ವಿವರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿದ್ದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅದ್ವೈತ್ ಎಂಬ ಪುಟ್ಟ ಹುಡುಗನೊಂದಿಗೆ ಸ್ವತಃ ಮಾತನಾಡುವ ಹಾಗೂ ಆತನ ಕನಸುಗಳು ಹಾಗೂ ಆಕಾಂಕ್ಷೆಗಳ ಬಗ್ಗೆ ಕೇಳುವ ವೀಡಿಯೊವನ್ನು ರಾಹುಲ್ ಗಾಂಧಿ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ್ಶಾರೆ.
ಯಾವುದೇ ಕನಸು ದೊಡ್ಡದಲ್ಲ. ಅದ್ವೈತ್ ಅವರ ಕನಸನ್ನು ನನಸಾಗಿಸಲು ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಈಗ ಸಮಾಜವನ್ನು ನಿರ್ಮಿಸುವುದು ನಮ್ಮ ಕರ್ತವ್ಯವಾಗಿದ್ದು. ಅದು ಅವನಿಗೆ ಹಾರುವ ಎಲ್ಲ ಅವಕಾಶಗಳನ್ನು ನೀಡುತ್ತದೆ ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಪುಟ್ಟ ಹುಡುಗನೊಂದಿಗೆ ಮಾತನಾಡುವುದರೊಂದಿಗೆ ವೀಡಿಯೊ ಆರಂಭವಾಗುತ್ತದೆ. ದೊಡ್ಡವನಾದ ಮೇಲೆ ಏನಾಗಬೇಕೆಂದು ಬಯಸಿರುವೆ ಎಂದು ರಾಹುಲ್ ಬಾಲಕನನ್ನು ಕೇಳುತ್ತಾರೆ. ಅದಕ್ಕೆ ಪುಟ್ಟ ಬಾಲಕ, ತಾನು ಪೈಲಟ್ ಆಗಲು ಬಯಸುತ್ತೇನೆ ಎಂದು ತಕ್ಷಣ ಪ್ರತಿಕ್ರಿಯಿಸುತ್ತಾನೆ. ತಾನು ಹಾರಲು ಬಯಸಿದ್ದರಿಂದ ಪೈಲಟ್ ಆಗಲು ಬಯಸುತ್ತೇನೆ ಎಂದು ಬಾಲಕ ಹೇಳುತ್ತಾನೆ.
ಮರುದಿನ ರಾಹುಲ್ ಅವರು ಅದ್ವೈತ್ ಗೆ ವಿಮಾನದ ಕಾಕ್ ಪಿಟ್ ಗೆ ಭೇಟಿ ನೀಡಲು ವ್ಯವಸ್ಥೆ ಮಾಡುತ್ತಾರೆ. ವಿಮಾನವನ್ನು ಹಾರಿಸುವ ಕಾರ್ಯವಿಧಾನಗಳ ಬಗ್ಗೆ ರಾಹುಲ್ ಹಾಗೂ ಪೈಲಟ್ ವಿವರಿಸುವ ಎಲ್ಲ ವಿಷಯವನ್ನು ಬಾಲಕ ಆಲಿಸುತ್ತಾನೆ.
ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿಯಲ್ಲಿ ಅದ್ವೈತ್ ಹಾಗೂ ಅವರ ಹೆತ್ತವರನ್ನು ರಾಹುಲ್ ಇತ್ತೀಚೆಗೆ ಭೇಟಿಯಾಗಿದ್ದರು. ಅವರು ಕೇರಳ ರಾಜ್ಯದಲ್ಲಿ ಎರಡು ದಿನಗಳ ಚುನಾವಣಾ ಪ್ರಚಾರದ ಪ್ರವಾಸದಲ್ಲಿದ್ದರು.
ರಾಹುಲ್ ಗಾಂಧಿ ಹಂಚಿಕೊಂಡ ವೀಡಿಯೊವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಈ ವೀಡಿಯೊ ಇನ್‍ಸ್ಟಾಗ್ರಾಮ್ ನಲ್ಲಿ 1.6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ.







