ಜಮಾಅತೆ ಇಸ್ಲಾಮಿ ಹಿಂದ್ ಹಿರಿಯ ನಾಯಕ ಪ್ರೊ. ಸಿದ್ದೀಕ್ ಹಸನ್ ಸಾಹೇಬ್ ನಿಧನ

ಕ್ಯಾಲಿಕಟ್, ಎ.6: ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಕೇರಳ ರಾಜ್ಯಾಧ್ಯಕ್ಷ ಹಾಗು ಹಿರಿಯ ಚಿಂತಕ ಪ್ರೊ. ಕೆ.ಎ.ಸಿದ್ದೀಕ್ ಹಸನ್ (76) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದಾಗಿ ಹಲವು ಸಮಯಗಳಿಂದ ಕೋಝಿಕೋಡ್‌ನ ಕೋವೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ಅವರು ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕೆ.ಎಂ. ಅಬ್ದುಲ್ಲ ಮೌಲವಿ ಮತ್ತು ಖದೀಜಾ ದಂಪತಿಯ ಪುತ್ರನಾಗಿ 1945 ಮೇ 5ರಂದು ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರ್ ಏರಿಯಾಟ್ ಎಂಬಲ್ಲಿ ಜನಿಸಿದ ಅವರು ಫಾರೂಕ್ ರೌಲತುಲ್ ಉಲೂಂ ಅರೆಬಿಕ್ ಕಾಲೇಜ್, ಶಾಂತಪುರಂ ಇಸ್ಲಾಮಿಯಾ ಕಾಲೇಜುಗಳಿಂದ ಆಫ್ಝಲುಲ್ ಉಲಮಾ ಮತ್ತು ಅರೆಬಿಕ್‌ನಲ್ಲಿ ಎಂಎ ಪದವಿಯನ್ನು ಪಡೆದಿದ್ದರು.
ತಿರುವನಂತಪುರಂ ಯುನಿವರ್ಸಿಟಿ ಕಾಲೇಜ್, ಎರ್ನಾಕುಲಂ ಮಹಾರಾಜ ಕಾಲೇಜ್, ಕೊಯಿಲಾಂಡಿ, ಕೊಡನ್ ಚೆರಿ, ಕಾಸರಗೋಡು ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.
ಬರಹಗಾರರಾಗಿ, ಇಸ್ಲಾಮಿ ವಿದ್ವಾಂಸರಾಗಿ, ವಾಗ್ಮಿಯಾಗಿ, ಸಮಾಜ ಸೇವಕರಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಕೇರಳದ ಮಾಧ್ಯಮಂ ಮಲಯಾಳಂ ದೈನಿಕ ಪ್ರಾರಂಭಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಅವರು, ಐಡಿಯಲ್ ಪಬ್ಲಿಕೇಶನ್‌ನ ಸ್ಥಾಪಕ ಕಾರ್ಯದರ್ಶಿ ಹಾಗೂ ಬಳಿಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕೇರಳ ಭಾಷಾ ಇನ್‌ಸ್ಟಿಟ್ಯೂಟ್ ಪ್ರಕಟಿಸುತ್ತಿರುವ ಇಸ್ಲಾಂ ದರ್ಶನದ ಅಸಿಸ್ಟೆಂಟ್ ಎಡಿಟರ್ ಹೊಣೆಗಾರಿಕೆಯನ್ನು ಅವರು ನಿಭಾಯಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿಯುಕ್ತರಾಗುವುದಕ್ಕಿಂತ ಮುಂಚೆ ಅವರು 1990ರಿಂದ 2005ರವರೆಗೆ ನಾಲ್ಕು ಬಾರಿ ಜಮಾಅತೆ ಇಸ್ಲಾಮಿ ಹಿಂದ್ ಕೇರಳ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಹೊಸದಿಲ್ಲಿ ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಹ್ಯೂಮನ್ ಡೆವಲಪ್‌ಮೆಂಟ್ ಫೌಂಡೇಶನ್‌ನ ‘ವಿಝನ್ 2016’ ಯೋಜನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿರುವ ಜನಸಮೂಹದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಅನೇಕ ಯೋಜನೆಗಳಿಗೆ ಅವರು ನೇತೃತ್ವ ನೀಡಿದ್ದರು.
ಹ್ಯೂಮನ್ ವೆಲ್ಫೇರ್ ಫೌಂಡೇಶನ್, ಹ್ಯೂಮನ್ ವೆಲ್ಫೇರ್ ಟ್ರಸ್ಟ್, ಎಪಿಸಿಆರ್, ಸೊಸೈಟಿ ಫಾರ್ ಬ್ರೈಟ್ ಫ್ಯೂಚರ್, ಮೆಡಿಕಲ್ ಸರ್ವಿಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಆಲ್ಟರ್ನೇಟಿವ್ ಇನ್ವೆಸ್ಟ್‌ಮೆಂಟ್ ಆ್ಯಂಡ್ ಕ್ರೆಡಿಟ್ ಲಿ.ನ ಅಧ್ಯಕ್ಷರಾಗಿ, ಬೈತು ಝಕಾತ್ ಕೇರಳದ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಸೆಂಟರ್ ಫಾರ್ ಇನ್ಫಾರ್ಮೇಶನ್ ಆ್ಯಂಡ್ ಗೈಡೆನ್ಸ್ ಇಂಡಿಯಾ, ಶಾಫಿ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿದ್ದರು.
ಮಂಗಳವಾರ ರಾತ್ರಿ 11 ಗಂಟೆಯವರೆಗೆ ವೆಳ್ಳಿಮಾಡುಕುನ್ನು ಜೆಡಿಟಿಯಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬುಧವಾರ ಬೆಳಗ್ಗೆ 8:30ಕ್ಕೆ ಕಲ್ಲಿಕೋಟೆಯ ಜುಮಾ ಮಸೀದಿಯ ಕಬರ್ ಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮೂಲಗಳು ತಿಳಿಸಿವೆ.
ಜಮಾಅತೆ ಇಸ್ಲಾಮಿ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಯು., ಆಯಿಶಾ ವಿದ್ಯಾ ಸಂಸ್ಥೆಯ ಅಮೀನ್ ಅಹ್ಸನ್, ಅನುಪಮ ಮಾಸಿಕದ ಮುಹ್ಸಿನ್, ಎಸ್‌ಐಒ ನಾಯಕ ನಿಹಾಲ್ ಮುಹಮ್ಮದ್, ಅನಿವಾಸಿ ಉದ್ಯಮಿ ಮಹ್ಫೂಝುರ್ರಹ್ಮಾನ್ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.







