ಸಚಿನ್ ವಾಝೆಯೊಂದಿಗೆ ಮುಂಬೈ ರೈಲ್ವೆ ನಿಲ್ದಾಣದಲ್ಲಿ ದೃಶ್ಯ ಮರು ಸೃಷ್ಟಿಸಿದ ಎನ್ ಐಎ
ಮನ್ಸುಖ್ ಹಿರಾನ್ ಹತ್ಯೆ ಪ್ರಕರಣ

ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ವಿಧಿವಿಜ್ಞಾನ ತಂಡದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(ಸಿಎಸ್‍ಎಂಟಿ)ಸೋಮವಾರ ಸ್ಥಳವನ್ನು ಮರುಪರಿಶೀಲಿಸಿದೆ.
ಅಂಬಾನಿ ನಿವಾಸದ ಸಮೀಪ ಪತ್ತೆಯಾದ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋದ ಮಾಲಕ ಮನ್ಸುಖ್ ಹಿರಾನ್ ಹತ್ಯೆಯಾದ ದಿನದಂದೇ ಬಂಧಿತ ಸಹಾಯಕ ಪೊಲೀಸ್ ಇನ್‍ಸ್ಪೆಕ್ಟರ್ ಸಚಿನ್ ವಾಝೆ ಸಿಎಸ್‍ಎಂಟಿಯಿಂದ ಥಾಣೆಗೆ ತೆರಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನಸಂದಣಿಯಿಂದ ತಪ್ಪಿಸಿಕೊಳ್ಳಲು ದೃಶ್ಯವನ್ನು ಮರು ಸೃಷ್ಟಿಸಲು ಎನ್ ಐಎ ತಂಡವು ತಡರಾತ್ರಿ ಸಚಿನ್ ವಾಝೆ ಅವರನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದಿತ್ತು ಎಂದು ಮೂಲಗಳು ತಿಳಿಸಿವೆ.
ಎನ್ ಐಎ ತಂಡವು ಸಾಕ್ಷಿಗಳು, ವಿಧಿ ವಿಜ್ಞಾನ ತಂಡ(ಡಿಜಿಟಲ್)ತಜ್ಞರು ಹಾಗೂ ರೈಲ್ವೆ ರಕ್ಷಾ ಪಡೆ(ಆರ್ ಪಿಎಫ್) ಅಧಿಕಾರಿಗಳೊಂದಿಗೆ ವಾಝೆ ಅವರನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಪ್ಲಾಟ್ ಫಾರ್ಮ್ ನಂ.1ರಲ್ಲಿ ನಡೆದುಕೊಂಡು ಹೋಗುವಂತೆ ಮಾಡಿತು. ಈ ಮರು ಸೃಷ್ಟಿಯ ದೃಶ್ಯವನ್ನು ಮಾರ್ಚ್ 1ರಂದು ಸಿಸಿಟಿವಿ ಫುಟೇಜ್ ನಲ್ಲಿ ಕಂಡುಬಂದ ವ್ಯಕ್ತಿಯೊಂದಿಗೆ ಹೋಲಿಸಲಾಯಿತು.
ಇದಕ್ಕೂ ಮೊದಲು ಎನ್ ಐಎ ತಂಡವು ಪಂಚತಾರಾ ಹೊಟೇಲ್ ಸಹಿತ ಹಲವು ಸ್ಥಳಗಳಲ್ಲಿ ವಾಝೆ ಅವರನ್ನು ಕರೆದೊಯ್ದಿತ್ತು. ಪಂಚತಾರಾ ಹೊಟೇಲ್ ನಲ್ಲಿ ವಾಝೆ ಅವರು ಸದಾಶಿವ ಖಾಮ್ಕರ್ ಎಂಬ ನಕಲಿ ಹೆಸರಿನಲ್ಲಿ ತಂಗಿದ್ದರು.
ಎನ್ ಐಎ ದಮಾನ್ ನಿಂದ ಇಟಲಿ ನಿರ್ಮಿತ 6 ಲಕ್ಷ ರೂ. ಮೌಲ್ಯದ ಬೈಕ್ ಅನ್ನು ವಶಪಡಿಸಿಕೊಂಡಿದೆ.







