ಮಂಗಳೂರು; ಚೈಲ್ಡ್ ಕೇರ್ ಸೆಂಟರ್ನಲ್ಲಿ ಲೈಂಗಿಕ ಕಿರುಕುಳ ಆರೋಪ : ವಾರ್ಡನ್ ಬಂಧನ

ಕಮಿಷನರ್ ಪತ್ರಿಕಾಗೋಷ್ಠಿ
ಮಂಗಳೂರು, ಎ.6: ಉಳ್ಳಾಲ ನೂರಾನಿ ಯತೀಂ ಖಾನಾ ಆ್ಯಂಡ್ ದಾರುಲ್ ಮಸ್ಕೀನ್ ಚೈಲ್ಡ್ಕೇರ್ ಸೆಂಟರ್ನಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರ್ ಸೆಂಟರ್ನ ವಾರ್ಡನ್ನನ್ನು ಬಂಧಿಸಲಾಗಿದೆ.
ಕೋಣಾಜೆ ನಿವಾಸಿ ಚೈಲ್ಡ್ ಕೇರ್ ಸೆಂಟರ್ ವಾರ್ಡನ್ ಅಯೂಬ್ (52) ಬಂಧಿತ ಆರೋಪಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ ನೂರಾನಿ ಚೈಲ್ಡ್ ಕೇರ್ ಸೆಂಟರ್ನಲ್ಲಿ ಸುಮಾರು 51ಕ್ಕೂ ಅಧಿಕ ಅನಾಥ ವಿದ್ಯಾರ್ಥಿಗಳಿದ್ದಾರೆ. ಆರೋಪಿ ಚೈಲ್ಡ್ ಸೆಂಟರ್ನ ಸುಮಾರು ನಾಲ್ಕು ಮಂದಿಯ ಮೇಲೆ ಅನುಚಿತ ವರ್ತನೆ, ಲೈಂಗಿಕ ದೌರ್ಜನ್ಯವೆಸಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ನಗರದ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಇದೊಂದು ಗಂಭೀರ ಪ್ರಕರಣವಾದ ಕಾರಣ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಅವರನ್ನು ತನಿಖಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿ ಗಳಿಗೆ ಮಾಹಿತಿ ನೀಡಲಾಗಿದ್ದು, ಅವರ ವ್ಯಾಪ್ತಿಯಲ್ಲಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಅಪ್ರಾಪ್ತ ಮಕ್ಕಳನ್ನು ವಿಚಾರಣೆ ನಡೆಸಿದಾಗ ಆರೋಪಿ ಸುಮಾರು 4 ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸಿರುವುದು ತಿಳಿದು ಬಂದಿದೆ. ಅಪ್ರಾಪ್ತ ಮಕ್ಕಳು ಹೇಳಿದ ವಿಚಾರವನ್ನು ಗೌಪ್ಯವಾಗಿರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಅವರ ಮುಂದಾಳುತ್ವದಲ್ಲಿ ಮಾ.28ರಂದು ನಾನಾ ಸಂಸ್ಥೆಗಳ ಸಹಕಾರದೊಂದಿಗೆ ನಗರದ 30 ಚೈಲ್ಡ್ಲೈನ್ ಕೇರ್ ಸೆಂಟರ್ನ 480 ಕ್ಕೂ ಹೆಚ್ಚು ಮಕ್ಕಳಿಗೆ ನಗರದ ಟಿಎಂಎ ಪೈ ಹಾಲ್ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ದೌರ್ಜನ್ಯ ಸೇರಿದಂತೆ ನಾನಾ ರೀತಿಯ ಮಾಹಿತಿ ನೀಡಲಾಯಿತು. ಈ ವೇಳೆ ಪ್ರತಿಯೊಂದು ಮಗುವಿನ ಬಳಿ 20 ನಿಮಿಷಗಳ ಕಾಲ ಅಧಿಕಾರಿಗಳು, ಕೌನ್ಸಿಲರ್ಗಳು ಆಪ್ತ ಸಮಾಲೋಚನೆ ನಡೆಸಿದ್ದು, ಈ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಿಗೆ ಬಂದಿದೆ. ಈ ಮಾಹಿತಿ ಆಧಾರದಲ್ಲೇ ಸೋಮವಾರ ರಹಸ್ಯವಾಗಿ ನಗರ ಪೊಲೀಸರು ಉಳ್ಳಾಲ ನೂರಾನಿ ಸೆಂಟರ್ಗೆ ತೆರಳಿ ಚೈಲ್ಡ್ಲೈನ್ ಸೆಂಟರ್ ಮಕ್ಕಳಿಗೆ ಮತ್ತು ವಾರ್ಡನ್ನವರಿಗೆ ಪ್ರತ್ಯೇಕ ಸಮಾಲೋಚನಾ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಮಕ್ಕಳನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಆರೋಪಿ ನಡೆಸಿದ ಕೃತ್ಯ ಬಯಲಿಗೆ ಬಂದಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ಈ ಕಾರ್ಯಕ್ರಮದ ಮೂಲಕ ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 6 ಸಂಸ್ಥೆಗಳ 20ಕ್ಕೂ ಅಧಿಕ ಚೈಲ್ಡ್ ಕೇರ್ ಸೆಂಟರ್ನಲ್ಲಿ ಬಾಲಕರ ಮೇಲೆ ನಾನಾ ರೀತಿಯಲ್ಲಿ ದೌರ್ಜನ್ಯವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂಬಂಧಪಟ್ಟ ಮಕ್ಕಳನ್ನು ಚೈಲ್ಡ್ ವೆಲ್ ಫೇರ್ ಕಮಿಟಿಗೆ ಹಸ್ತಾಂತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48 ಚೈಲ್ಡ್ಕೇರ್ ಸೆಂಟರ್ಗಳಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೇ 30 ಇವೆ. ಈ ಸಂಸ್ಥೆಗಳು ಸರಕಾರದಿಂದ ಸಹಾಯಧನವನ್ನು ಪಡೆಯುತ್ತಿವೆ ಎಂದು ನಗರ ಡಿಸಿಪಿ ಹರಿರಾಮ್ಶಂಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್, ಮಂಗಳೂರು ದಕ್ಷಿಣ ವಿಭಾಗ ಎಸಿಪಿ ರಂಜಿತ್, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ಡಾ. ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.

ಅಯೂಬ್







