ಛತ್ತೀಸಗಢ ನಕ್ಸಲ್ ದಾಳಿ ಚಿತ್ರಗಳು ಎಂದು ಚಲನಚಿತ್ರದ ಶೂಟಿಂಗ್ ನ ಫೋಟೋ ಪ್ರಕಟಿಸಿದ ‘ದೈನಿಕ್ ಭಾಸ್ಕರ್’

ಹೊಸದಿಲ್ಲಿ: ಛತ್ತೀಸಗಢದ ತೆಕಲ್ಗುಡಂ ಗ್ರಾಮದ ಸುಕ್ಮಾ-ಬಿಜಾಪುರ ಗಡಿ ಸಮೀಪ ಶನಿವಾರ ನಡೆದ ಮಾವೋವಾದಿಗಳ ಜತೆಗಿನ ಸಂಘರ್ಷದಲ್ಲಿ 22 ಸಿಆರ್‍ಪಿಎಫ್ ಯೋಧರು ಹತರಾದ ಅತ್ಯಂತ ಗಂಭೀರ ಹಾಗೂ ದುರಂತಮಯ ಘಟನೆ ಮರೆಯಲು ಅಸಾಧ್ಯ. ಇಂತಹ ಒಂದು ವಿದ್ಯಮಾನವನ್ನು ಮಾಧ್ಯಮಗಳು ಬಹಳಷ್ಟು ಜವಾಬ್ದಾರಿಯುತವಾಗಿ ಹಾಗೂ ನಿಖರವಾಗಿ ವರದಿ ಮಾಡಬೇಕಿದೆ. ಆದರೆ ‘ದೈನಿಕ್ ಭಾಸ್ಕರ್’ ಮಾಡಿದ ಕೆಲಸ ಮಾತ್ರ ನಿಜಕ್ಕೂ ಆಘಾತಕಾರಿ.
ಸೋಮವಾರ ಎಪ್ರಿಲ್ 5ರಂದು ಈ ಹಿಂದಿ ಸುದ್ದಿ ತಾಣ ತನ್ನ ವೆಬ್ ಸೈಟ್‍ನಲ್ಲಿ ಘಟನೆಯದ್ದೆಂದು ಹೇಳಲಾದ ಛಾಯಾಚಿತ್ರಗಳನ್ನು ಹಾಗೂ ವೀಡಿಯೋಗಳನ್ನು ಪ್ರಕಟಿಸಿತ್ತು ಹಾಗೂ ವರದಿಯಲ್ಲಿ `ಬಿಜಾಪುರ ಎನ್‍ಕೌಂಟರ್ ಸ್ಥಳದ ಚಿತ್ರಗಳು ಮತ್ತು ವೀಡಿಯೋಗಳು,'' ಎಂದು ವಿವರಿಸಲಾಗಿತ್ತು.
ಶಸ್ತ್ರಾಸ್ತ್ರಗಳೊಂದಿಗೆ `ಮಾವೋವಾದಿಗಳ' ಚಿತ್ರಗಳಿದ್ದವು ಹಾಗೂ ವೀಡಿಯೋದಲ್ಲಿ ಎನಿಮೇಟೆಡ್ ರಾಕೆಟ್ ಲಾಂಚರ್ ಹಾಗೂ ನಕ್ಸಲೈಟ್ ಮಹಿಳೆಯರು ಇದ್ದರು. ಜತೆಗೆ ‘ದೈನಿಕ್ ಭಾಸ್ಕರ್’ ತನಗೆ ``ಚಿತ್ರಗಳನ್ನು ದೃಢೀಕರಿಸಲು ಸಾಧ್ಯವಾಗಿಲ್ಲ,'' ಎಂದು ಬರೆದಿದೆ.
ಅಷ್ಟಕ್ಕೂ ಇವು ಕಳೆದ ಶನಿವಾರ ನಡೆದ ಸಂಘರ್ಷದ ಚಿತ್ರಗಳಲ್ಲ, ಇವುಗಳು ಮಾವೋವಾದಿಗಳ ಕುರಿತಂತೆ ಛತ್ತೀಸಗಢದ ಬಸ್ತರ್ ಎಂಬಲ್ಲಿ ಚಿತ್ರೀಕರಿಸಲಾದ ಚಲನಚಿತ್ರದ ಫೋಟೋ ಹಾಗೂ ವೀಡಿಯೋಗಳು ಎಂಬುದು ಪ್ರಾಯಶಃ ಅವುಗಳನ್ನು ಪ್ರಕಟಿಸುವಾಗ ‘ದೈನಿಕ್ ಭಾಸ್ಕರ್’ಗೆ ತಿಳಿದಿರಲಿಲ್ಲ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಈ ನಿರ್ದಿಷ್ಟ ವರದಿಯನ್ನು ಡಿಲೀಟ್ ಮಾಡಲಾಗಿದೆ.
ದೈನಿಕ್ ಭಾಸ್ಕರ್ ಪ್ರಕಟಿಸಿದ್ದ ಫೋಟೋ ಹಾಗೂ ವೀಡಿಯೋಗಳು ವಾಸ್ತತವಾಗಿ ಜಗ್ದಲ್ಪುರ್ ಮೂಲದ ಸಂಪತ್ ಝಾ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಚಲನಚಿತ್ರದ್ದಾಗಿತ್ತು. ಈ ಫೋಟೋಗಳಲ್ಲಿ ಕಾಣಿಸಿರುವ `ಮಾವೋವಾದಿಗಳು' ನಟರಾಗಿದ್ದಾರೆ ಎಂದು ಚಿತ್ರ ತಂಡದಲ್ಲಿದ್ದವರೊಬ್ಬರು ಮಾಹಿತಿ ನೀಡಿದ್ದಾರೆ ಎಂದು newslaundry.com ವರದಿ ಮಾಡಿದೆ.
‘ದೈನಿಕ್ ಭಾಸ್ಕರ್’ ವರದಿಯಲ್ಲಿದ್ದ ವೀಡಿಯೋಗಳಲ್ಲಿ ಒಂದು ವೀಡಿಯೋ ಮಾರ್ಚ್ 2020ರದ್ದಾಗಿತ್ತು ಹಾಗೂ ಸುಕ್ಮಾ ಜಿಲ್ಲೆಯ ಗ್ರಾಮದಲ್ಲಿ ಹತ್ಯೆಗೀಡಾದ ಮಾವೋವಾದಿಯೊಬ್ಬನ ಅಂತ್ಯಕ್ರಿಯೆಯದ್ದಾಗಿತ್ತು.
ಈ ಕುರಿತು ‘ದೈನಿಕ್ ಭಾಸ್ಕರ್’ ಡಿಜಿಟಲ್ ಮಾಧ್ಯಮದ ಮುಖ್ಯಸ್ಥರಾಗಿರುವ ಪ್ರಸೂನ್ ಮಿಶ್ರಾ ಅವರನ್ನು newslaundry.com ಸಂಪರ್ಕಿಸಿದಾಗ, “ಈ ವಿಚಾರ ನನ್ನ ಗಮನಕ್ಕೆ ಬಂದಿದೆ, ಆದು ಅವಸರದಿಂದ ನಡೆದಿರಬಹುದು. ಕಳೆದ ಕೆಲ ದಿನಗಳಿಂದ ನಾನು ರಜೆಯಲ್ಲಿದ್ದೆ,'' ಎಂದಿದ್ದಾರೆ.
‘ದೈನಿಕ್ ಭಾಸ್ಕರ್’ ಪತ್ರಿಕೆಯ ರಾಷ್ಟ್ರೀಯ ಸಂಪಾದಕ ನವನೀತ್ ಗುರ್ಜರ್ ಪ್ರತಿಕ್ರಿಯಿಸಿ ``ದೃಢೀಕರಿಸಿ ಚಿತ್ರಗಳನ್ನು ಪ್ರಕಟಿಸಬೇಕಿತ್ತು. ನನಗೆ ಹೆಚ್ಚು ತಿಳಿದಿಲ್ಲದೇ ಇರುವುದರಿಂದ ಏನೂ ಹೇಳಲು ಸಾಧ್ಯವಿಲ್ಲ,'' ಎಂದರು.







