ವಿಕಲಚೇತನ ಸರಕಾರಿ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸರಕಾರ ಆದೇಶ

ಬೆಂಗಳೂರು, ಎ.6: ಕೋವಿಡ್ ಎರಡನೆ ಅಲೆಯ ಮುಂಜಾಗ್ರತೆ ಕ್ರಮವಾಗಿ ರಾಜ್ಯ ಸರಕಾರದ ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೃಷ್ಟಿದೋಷ ಹಾಗೂ ಇತರೆ ವಿಕಲಚೇತನ ಹೊಂದಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಕಲಚೇತನ ಸಿಬ್ಬಂದಿಗಳ ಆರೋಗ್ಯದೃಷ್ಟಿಯಿಂದ ಮನೆಯಲ್ಲಿಯೇ ಕೆಲಸ ಮಾಡಲು ಸೂಚಿಸಲಾಗಿದೆ. ಹಾಗೂ ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯದ ಮಾರ್ಗಸೂಚಿ ಅನ್ವಯ ಹೊರಡಿಸಲಾಗಿದ್ದ ಸುತ್ತೋಲೆಯನ್ನು ರಾಜ್ಯ ಸರಕಾರ ಮುಂದುವರಿಸಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಸರಕಾರಿ, ಅರೆ ಸರಕಾರಿ, ಸ್ವಾಯತ್ತ ಸಂಸ್ಥೆ, ನಿಗಮ ಮಂಡಳಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ದೃಷ್ಟಿದೋಷ ಹಾಗೂ ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Next Story





