ಎ.7ರಿಂದ ಸಾರಿಗೆ ನೌಕರರ ಮುಷ್ಕರ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ರಾಜ್ಯ ಸರಕಾರ
''6ನೇ ವೇತನ ಆಯೋಗದ ವರದಿಯಂತೆ ವೇತನ ಕೊಡಲು ಸಾಧ್ಯವೇ ಇಲ್ಲ''

ಬೆಂಗಳೂರು, ಎ.6: ಸಾರಿಗೆ ನೌಕರರು ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್ ಕಾಯ್ದೆ, ಎಸ್ಮಾ ಸೇರಿದಂತೆ ಯಾವುದಾದರೂ ಕಾಯ್ದೆಯಡಿ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಎಚ್ಚರಿಕೆ ನೀಡಿದರು.
ಸೋಮವಾರ ಮುಖ್ಯಮಂತ್ರಿ ಜೊತೆ ನಡೆದ ಸಾರಿಗೆ ನೌಕರರ ಮುಷ್ಕರ ಕುರಿತ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರನೆ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ಕೊಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಸಾರಿಗೆ ನೌಕರರ ವೇತನವನ್ನು ಶೇ.8ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ, ರಾಜ್ಯದಲ್ಲಿ ಉಪಚುನಾವಣಾ ಹಿನ್ನೆಲೆ ನೀತಿಸಂಹಿತೆ ಜಾರಿಯಲ್ಲಿ ಇದೆ. ಈ ಸಂಬಂಧ ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅನುಮತಿ ಸಿಕ್ಕ ಕೂಡಲೇ ಹೆಚ್ಚಳಕ್ಕೆ ಆದೇಶ ಹೊರಬೀಳಲಿದೆ ಎಂದರು.
ಕೋವಿಡ್ ಪರಿಸ್ಥಿತಿ ಕಾರಣಕ್ಕೆ ಮುಷ್ಕರಕ್ಕೆ ಹೋಗದಂತೆ ನೌಕರರಲ್ಲಿ ಮನವಿ ಮಾಡುತ್ತಿದ್ದೇವೆ ಎಂದ ಅವರು, ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಈಗಾಗಲೇ ಜಾರಿ ಮಾಡಿದ್ದೇವೆ. ಆದರೆ, ಸರಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸಿನಂತೆ ಕೊಡುವ ವೇತನ ನೀಡಲು ಸಾಧ್ಯವೇ ಇಲ್ಲ. ಸಾರಿಗೆ ನೌಕರರ ಜೊತೆ ಚರ್ಚಿಸಿ, ಸಂಧಾನ ಸಭೆ ಏರ್ಪಡಿಸಿ ಪ್ರತಿ 4 ವರ್ಷಕ್ಕೊಮ್ಮೆ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುತ್ತಿದ್ದೇವೆ ಎಂದರು.
ಮುಷ್ಕರಕ್ಕೆ ಹೋದರೆ ಜನರಿಗೆ ತೊಂದರೆ ಆಗಲಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ತೆಗೆದುಕೊಳ್ಳಲಿದೆ. ಮ್ಯಾಕ್ಸಿ ಕ್ಯಾಬ್‍ಗಳು ಸೇರಿದಂತೆ ಖಾಸಗಿ ವಾಹನಗಳನ್ನು ಓಡಿಸಲು ಅನುಮತಿ ನೀಡುತ್ತೇವೆ. ಅದಕ್ಕೆ ಸಾರಿಗೆ ಆಯುಕ್ತರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ನಷ್ಟ: ಕೊರೋನ ಪರಿಣಾಮದಿಂದ ಸಾರಿಗೆ ನಿಗಮಗಳಿಗೆ ಪ್ರತಿ ದಿನ 4 ಕೋಟಿ ನಷ್ಟವಾಗುತ್ತಿದೆ. ಎಲ್ಲ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಆದರೂ, ಆದಾಯ ಇಲ್ಲವೆಂದು ಸಂಬಳ ಕಡಿತ ಮಾಡಿಲ್ಲ. ಇನ್ನು, ಸಾರಿಗೆ ನೌಕರರ ವೇತನಕ್ಕೆ ಸರಕಾರ ಯಾವುದೇ ಸಮಸ್ಯೆ ಮಾಡಿಲ್ಲ. ಹೋದ ವರ್ಷ ಆದಾಯ ಇಲ್ಲದಿದ್ದರೂ ಸಾರಿಗೆ ನೌಕರರ ಸಂಬಳಕ್ಕೆ 2,100 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.







