ವೃದ್ಧೆ ನರ್ಸಿ ಮರಕಾಲ್ತಿ ಆಶ್ರಯ ಕಲ್ಪಿಸಲು ಉಡುಪಿ ಜಿಲ್ಲಾಡಳಿತಕ್ಕೆ ಮನವಿ
ಉಡುಪಿ, ಎ.6: ಮೂಳೆ ಮುರಿತಕ್ಕೊಳಗಾಗಿ ಸೊಂಟದ ಸ್ವಾಧೀನ ಕಳೆದು ಕೊಂಡ ಅಸಹಾಯಕ ಸ್ಥಿತಿಯಲ್ಲಿರುವ ಶಿರಿಯಾರ ಕಾಜರವಳ್ಳಿಯ ವೃದ್ಧೆ ನರ್ಸಿ ಮರಕಾಲ್ತಿ(75) ಎಂಬವರಿಗೆ ಜಿಲ್ಲಾಡಳಿತ, ಜನಪ್ರತಿನಿಧಿ ಹಾಗೂ ಇಲಾಖೆ ನೆರವು ನೀಡಬೇಕಾಗಿದೆ ಎಂದು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ನರ್ಸಿ ಮರಕಾಲ್ತಿ 8 ತಿಂಗಳ ಹಿಂದೆ ಒಳ ರೋಗಿ ಯಾಗಿ ದಾಖಲಾಗಿದ್ದರು. ಈ ವೇಳೆ ಅವರ ದೈಹಿಕ ಸ್ಥಿತಿ ಗಂಭೀರವಾಗಿತ್ತು. ನಡೆದಾಡಲು ಶಕ್ತರಾಗಲು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ದಾನಿಗಳ ನೆರವಿನಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನರ್ಸಿ, ವಿಶ್ರಾಂತಿಯಲ್ಲಿದ್ದಾರೆ ಎಂದರು.
ನರ್ಸಿ ಚಿಕಿತ್ಸೆಗೆ 1.5 ಲಕ್ಷ ರೂ. ವೆಚ್ಚವಾಗಿದ್ದು, ಈಗಾಗಲೇ 1 ಲಕ್ಷ ರೂ. ಮೊತ್ತ ಸಂಗ್ರಹವಾಗಿದೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ದಿನ ನಿಗದಿ ಯಾಗಿದೆ. ಅವರಿಗೆ ನಾಲ್ಕು ತಿಂಗಳ ವಿಶ್ರಾಂತಿ ಅಗತ್ಯವಿದೆ. ಮನೆಯವರ ಆಶ್ರಯವಿಲ್ಲದೆ ಇರುವುದರಿಂದ ನರ್ಸಿ ಅವರಿಗೆ ಎತ್ತ ಹೋಗಲು ದಾರಿ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಅನಾಥರ ಬದುಕು ರಸ್ತೆಯಲ್ಲಿ ಅಂತ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯು ಉಡುಪಿ ಯಲ್ಲಿ ಪುರ್ನವಸತಿ ಕೇಂದ್ರ ವನ್ನು ನಿರ್ಮಿಸಬೇಕು ಅವರು ಒತ್ತಾಯಿಸಿದರು.







