ಬಿಜೆಪಿ ಸಂಸದ ನಾಯಬ್ ಸೈನಿಯ ಕಾರಿಗೆ ಮುತ್ತಿಗೆ ಹಾಕಿ, ಗಾಜು ಪುಡಿಗಟ್ಟಿದ ರೈತರ ಗುಂಪು

ನಾಯಬ್ ಸೈನಿ (photo: twitter)
ಚಂಡೀಗಡ: ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಗುಂಪೊಂದು ಹರ್ಯಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ, ನಾಯಬ್ ಸೈನಿ ಅವರ ಕಾರನ್ನು ಸುತ್ತುವರಿದು, ಕಾರಿನ ಕಿಟಕಿ ಗಾಜು ಪುಡಿಗಟ್ಟಿದ ಘಟನೆ ಮಂಗಳವಾರ ನಡೆದಿದೆ.
ಸೈನಿ ಅವರು ಕುರುಕ್ಷೇತ್ರ ಜಿಲ್ಲೆಯ ಶಹಬಾದ್ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರತಿಭಟನಾಕಾರರ ಗುಂಪಿನಲ್ಲಿ ಕೆಲವು ಕಿಡಿಗೇಡಿಗಳು ಸಂಸದರ ಕಾರಿನ ಹಿಂದಿನ ಕಿಟಕಿ ಗಾಜುಗಳನ್ನು ಪುಡಿಗಟ್ಟಿದರು. ನಂತರ ಸಂಸದರ ಕಾರಿಗೆ ಬೆಂಗಾವಲು ನೀಡಲಾಯಿತು. ಘಟನೆಯಲ್ಲಿ ಸಂಸದರಿಗೆ ಏನೂ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸಂಸದರ ವಾಹನಕ್ಕೆ ದಾರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಘಟನೆಯ ಕುರಿತಾಗಿ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಶಹಬಾದ್ ನಗರದ ಡಿಎಸ್ಪಿ ಆತ್ಮ ರಾಮ್ ಹೇಳಿದ್ದಾರೆ,
ಇದಕ್ಕೂ ಮೊದಲು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) (ಚಾರುನಿ) ಗೆ ಸಂಬಂಧಿಸಿದ ರೈತರು ಸೈನಿಗೆ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು ಹಾಗೂ ಅವರ ಕಾರಿಗೆ ಅಡ್ಡಿಪಡಿಸಿದರು. ಪ್ರತಿಭಟನಾನಿರತ ರೈತರಿಂದ ಅಡ್ಡಿಪಡಿಸಲ್ಪಟ್ಟ ಮಾರ್ಗವನ್ನು ತೆರವುಗೊಳಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಡಬೇಕಾಯಿತು.
ಕಳೆದ ವರ್ಷ ಸಂಸತ್ತು ಅಂಗೀಕರಿಸಿದ ಮೂರು ಕೇಂದ್ರ ಕೃಷಿ ಸುಧಾರಣಾ ಕಾನೂನುಗಳಿಗೆ ಹರ್ಯಾಣ ಸರಕಾರದ ಬೆಂಬಲವನ್ನು ವಿರೋಧಿಸಿ ಬಿಕೆಯು (ಚಾರುನಿ) ಮತ್ತು ಇತರ ರೈತ ಗುಂಪುಗಳು ರಾಜ್ಯದಲ್ಲಿರುವ ಜನನಾಯಕ ಜನತಾ ಪಕ್ಷ (ಜೆಜೆಪಿ) ಮತ್ತು ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.