ಕೊರೋನ ಸೋಂಕಿನ ವೇಷ ಧರಿಸಿ ನಾಟಕ ಮಾಡುತ್ತಿದ್ದಾರೆ: ಜಾರಕಿಹೊಳಿ ವಿರುದ್ಧ ಕಮಿಷನರ್‌ಗೆ ವಕೀಲ ಜಗದೀಶ್ ದೂರು

ಬೆಂಗಳೂರು, ಎ.6: ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಆರೋಪಿ ಸ್ಥಾನದಲ್ಲಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಕೊರೋನ ಸೋಂಕಿನ ನಾಟಕ ಮಾಡುತ್ತಿದ್ದು, ಈ ಕೂಡಲೇ ವೈದ್ಯಕೀಯ ತಜ್ಞರಿಂದ ಸತ್ಯಾಂಶದ ವರದಿ ಪಡೆಯುವಂತೆ ಕೋರಿ ಸಂತ್ರಸ್ತ ಯುವತಿ ಪರ ವಕೀಲರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಲಿಖಿತ ದೂರು ಸಲ್ಲಿಕೆ ಮಾಡಿರುವ ವಕೀಲ ಜಗದೀಶ್ ಕೆ.ಎನ್.ಮಹಾದೇವ ಹಾಗೂ ಸೂರ್ಯ ಮುಕುಂದರಾಜ್, ಆರೋಪಿ ರಮೇಶ್ ಜಾರಕಿಹೊಳಿ ಬಂಧನದ ಭೀತಿಯಿಂದಾಗಿ ಕೊರೋನ ಸೋಂಕಿನ ವೇಷ ಧರಿಸಿ ನಾಟಕವಾಡುತ್ತಿದ್ದಾರೆ. ಹಾಗಾಗಿ, ನಿಜವಾಗಿಯೂ ಕೋವಿಡ್ ಸೋಂಕು ತಗಲಿದೆಯೇ ಎಂದು ಪರಿಶೀಲಿಸಲು ತಜ್ಞ ವೈದ್ಯರ, ಶ್ವಾಸಕೋಶ ತಜ್ಞರ ಮತ್ತು ವೈರಾಲಜಿಸ್ಟರ್ ಗಳ ಪರಿಣಿತರ ತಂಡವನ್ನು ಕಳುಹಿಸಿ ತಪಾಸಣೆ ನಡೆಸಿ ವರದಿ ನೀಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಏನಿದೆ?: ಕೋವಿಡ್ ಸೋಂಕು ಪೀಡಿತರಾದ ರಮೇಶ್ ಜಾರಕಿಹೊಳಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಗೋಕಾಕ್ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವೀಂದ್ರ ಹೇಳಿಕೆ ನೀಡಿದ್ದಲ್ಲದೆ, ಮಾಧ್ಯಮಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾದ ವಿಡಿಯೊವೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಅಲ್ಲದೆ, ಮಾಧ್ಯಮಗಳಲ್ಲಿ ರಮೇಶ್ ಜಾರಕಿಹೊಳಿ ಅವರು ಪಿಪಿಇ ಕಿಟ್ ಹಾಗೂ ಬಟ್ಟೆ ಮಾಸ್ಕ್ ಧರಿಸಿ ಐಸಿಯುನಲ್ಲಿ ಮಲಗಿರುವ ವಿಡಿಯೊ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವೈದ್ಯಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಐಸಿಯುನಲ್ಲಿ ವೆಂಟಿಲೇಟರ್ ನ ಆಕ್ಸಿಜನ್ ಮಾಸ್ಕ್ ಬದಲು ಬಟ್ಟೆ ಮಾಸ್ಕ್ ಹಾಕಿ ಚಿಕಿತ್ಸೆ ನೀಡುವ ಹೊಸ ವಿಧಾನವನ್ನು ಗೋಕಾಕ್ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಪರಿಚಯ ಮಾಡಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ಪ್ರಭಾವದಿಂದ ಸರಕಾರಿ ಆಸ್ಪತ್ರೆ ಸಿಬ್ಬಂದಿ ಮೇಲೆ ಒತ್ತಡ ಹೇರಿ ನಕಲಿ ಕೋವಿಡ್ ಪಾಸಿಟಿವ್ ವರದಿ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ನಾಟಕ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಇಲ್ಲಿವರೆಗೂ ಸಿಟ್ ಅಧಿಕಾರಿಗಳ ವಿಚಾರಣೆಗೂ ಹಾಜರಾಗದೇ ತನಿಖೆಗೆ ಸಹಕಾರ ನೀಡುತ್ತಿಲ್ಲ. ಹಾಗಾಗಿ, ಕೋವಿಡ್ ಸೋಂಕು ತಗುಲಿದೆಯೇ ಎಂದು ಪರಿಶೀಲಿಸಲು ತಜ್ಞ ವೈದ್ಯರ, ಶ್ವಾಸಕೋಶ ತಜ್ಞರ ಮತ್ತು ವೈರಾಲಜಿಸ್ಟರ್ ಗಳ ಪರಿಣಿತರ ತಂಡವನ್ನು ಕಳುಹಿಸಿ ತಪಾಸಣೆ ನಡೆಸಿ ವರದಿ ನೀಡುವಂತೆ ದೂರಿನಲ್ಲಿ ವಕೀಲರು ಉಲ್ಲೇಖಿಸಿದ್ದಾರೆ.
ಸಿಟ್ ಸಭೆ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೀಡಿ ಪ್ರಕರಣದಲ್ಲಿ ಯುವತಿ ನೀಡಿರುವ ಹೇಳಿಕೆ ರದ್ದುಪಡಿಸುವಂತೆ ಕೋರಿ ಆಕೆಯ ತಂದೆ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಗೃಹ ಇಲಾಖೆ ಹಾಗೂ ಸಿಟ್‍ಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆ ಮಂಗಳವಾರ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ ನಡೆದ ತನಿಖಾ ಪ್ರಗತಿ ವರದಿ ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳಿಗೆ ಸಲ್ಲಿಸುವಂತೆ ಆದೇಶಿಸಿ ಯುವತಿ ಪರ ತಂದೆ ನೀಡಿದ ರಿಟ್ ಅರ್ಜಿಯನ್ನು ಎ.17ಕ್ಕೆ ಹೈಕೋರ್ಟ್ ಮುಂದೂಡಿತ್ತು. ಈ ಸಂಬಂಧ ನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸಭೆ ನಡೆಸಿದ ಅಧಿಕಾರಿಗಳು, ತನಿಖಾ ವರದಿ ಸಲ್ಲಿಸುವ ಕುರಿತಂತೆ ಯಾವೆಲ್ಲಾ ಅಂಶಗಳನ್ನು ಉಲ್ಲೇಖಿಸಬೇಕು ಸೇರಿದಂತೆ ಇನ್ನಿತರೆ ಕಾನೂನುಗಳ ಕುರಿತು ಚರ್ಚಿಸಿದರು.







