ದಿಲ್ಲಿ ಹಿಂಸಾಚಾರ: ಪೊಲೀಸ್ ಸಾಕ್ಷಿಗಳ ವಿಶ್ವಾಸಾರ್ಹತೆ ಕುರಿತು ಶಂಕೆ ವ್ಯಕ್ತಪಡಿಸಿ ಆರೋಪಿಗೆ ಜಾಮೀನು ನೀಡಿದ ನ್ಯಾಯಾಲಯ

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬನಿಗೆ ಇಂದು ಜಾಮೀನು ಮಂಜೂರುಗೊಳಿಸಿದ ದಿಲ್ಲಿಯ ನ್ಯಾಯಾಲಯ ಈ ಘಟನೆ ನಡೆದ ದಿನ ದೂರುದಾರ ಪೊಲೀಸರಿಗೆ ಕರೆ ಮಾಡಿಲ್ಲದೇ ಇದ್ದುದರಿಂದ ಪೊಲೀಸರು ಹಾಜರುಪಡಿಸಿದ ಸಾಕ್ಷಿಗಳ ಹೇಳಿಕೆಗಳ ಕುರಿತು ಗಂಭೀರ ಶಂಕೆಗಳನ್ನು ವ್ಯಕ್ತಪಡಿಸಿದೆ ಎಂದು indianexpress.com ವರದಿ ಮಾಡಿದೆ.
ಹತ್ತೊಂಬತ್ತು ವರ್ಷದ ಯುವಕನೊಬ್ಬ ಗುಂಡೇಟಿಗೊಳಗಾದ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಶಾಹ್ ಆಲಂ ಎಂಬಾತನಿಗೆ ಇಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರಾಗಿರುವ ವಿನೋದ್ ಯಾದವ್ ಜಾಮೀನು ಮಂಜೂರುಗೊಳಿಸಿದರು.
ಗಾಯಾಳು ಪ್ರಿನ್ಸ್ ಬನ್ಸಾಲ್ ಎಂಬಾತ ಮಾರ್ಚ್ 2, 2020ರಂದು ನೀಡಿದ್ದ ದೂರಿನಲ್ಲಿ ಜಾಮೀನು ಅರ್ಜಿದಾರ (ಆರೋಪಿಯ) ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
``ಯಾವುದೇ ವೀಡಿಯೋ/ಸಿಸಿಟಿವಿ ದೃಶ್ಯಾವಳಿಯಲ್ಲೂ ಅರ್ಜಿದಾರ ಕಾಣಿಸುತ್ತಿಲ್ಲ. ಪೊಲೀಸರು ಹಾಜರುಪಡಿಸಿದ ಸಾಕ್ಷಿಗಳಾದ ಕುಲದೀಪ್ ಬನ್ಸಾಲ್ ಹಾಗೂ ನರೇಂದರ್ ಬನ್ಸಾಲ್ ಅವರ ಹೇಳಿಕೆಗಳಲ್ಲಿ `ದಿನಾಂಕ' ನಮೂದಿತವಾಗಿಲ್ಲ ಹಾಗೂ ಈ ಕುರಿತು ತನಿಖಾ ಏಜನ್ಸಿ ಸಮಾಧಾನಕರ ಉತ್ತರ ನೀಡಿಲ್ಲ,'' ಎಂದು ನ್ಯಾಯಾಲಯ ಹೇಳಿದೆ.
ಆರೋಪಿಯನ್ನು ಕಾನ್‍ಸ್ಟೇಬಲ್‍ಗಳಾದ ಪವನ್ ಹಾಗೂ ಸೌದನ್ ನೋಡಿದ್ದಾರೆಂಬ ಕುರಿತ ಪೊಲೀಸರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, "ಹಾಗಿದ್ದರೆ ಅವರೇಕೆ ಆಗಲೇ ಈ ವಿಚಾರವನ್ನು ಠಾಣೆಗೆ ಅಥವಾ ಮೇಲಧಿಕಾರಿಗಳಿಗೆ ತಿಳಿಸಿಲ್ಲ,'' ಎಂದು ಪ್ರಶ್ನಿಸಿದೆಯಲ್ಲದೆ ಪೊಲೀಸರ ಸಾಕ್ಷಿಗಳ ಹೇಳಿಕೆಯ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಶಂಕೆ ಮೂಡುವಂತಾಗಿದೆ ಎಂದು ಹೇಳಿದೆ.







