ಪಿಪಿಇ ಧರಿಸಿ ಮತ ಚಲಾಯಿಸಿದ ಡಿಎಂಕೆ ಸಂಸದೆ ಕನ್ನಿಮೋಳಿ

ಚೆನ್ನೈ: ಇತ್ತೀಚೆಗಷ್ಟೇ ಕೊರೋನ ಸೋಂಕಿಗೆ ಒಳಗಾಗಿದ್ದ ಡಿಎಂಕೆ ಸಂಸದೆ ಕನ್ನಿಮೋಳಿ ಅವರು ಮಂಗಳವಾರ ದಕ್ಷಿಣ ಚೆನ್ನೈನ ಮೈಲಾಪುರದಲ್ಲಿ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನ) ಯನ್ನು ಧರಿಸಿಕೊಂಡು ಮತ ಚಲಾಯಿಸಿದ್ದಾರೆ.
ಪಕ್ಷದ ದಿವಂಗತ ಸಂಸ್ಥಾಪಕ ಎಂ. ಕರುಣಾನಿಧಿ ಅವರ ಪುತ್ರಿ, ಡಿಎಂಕೆಯ ಹಿರಿಯ ನಾಯಕಿ ಕನ್ನಿಮೋಳಿ ಚೆನ್ನೈ ಆಸ್ಪತ್ರೆಯಲ್ಲಿ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದು, ಆ್ಯಂಬುಲೆನ್ಸ್‌ನಲ್ಲಿ ಅವರು ಮತದಾನ ಕೇಂದ್ರಕ್ಕೆ ಬಂದರು.
ಕನ್ನಿಮೋಳಿ ಸಂಜೆ 6-7 ರ ನಡುವೆ ಮತ ಚಲಾಯಿಸಿದರು, ಇದು ಕೋವಿಡ್-ಪಾಸಿಟಿವ್ ಮತದಾರರಿಗೆ ಗೊತ್ತುಪಡಿಸಿದ ಸಮಯವಾಗಿದೆ.
ಆ್ಯಂಬುಲೆನ್ಸ್‌ನಲ್ಲಿನ ಸಂಸದೆಯ ಸಿಬ್ಬಂದಿ, ಮತಗಟ್ಟೆಯ ಅಧಿಕಾರಿಗಳು ಹಾಗೂ ಮಾಧ್ಯಮ ಸಿಬ್ಬಂದಿ ಎಲ್ಲರೂ ಕೋವಿಡ್ ಸೋಂಕನ್ನು ತಡೆಗಟ್ಟಲು ರಕ್ಷಣಾತ್ಮಕ ಸೂಟ್‌ಗಳನ್ನು ಧರಿಸಿದ್ದರು.
ಕನ್ನಿಮೋಳಿ ಮತ ಚಲಾಯಿಸಿದ ನಂತರ, ಮಾಧ್ಯಮಗಳಿಗೆ ಪೋಸ್ ನೀಡಿದರು, ವಿಜಯದ ಸಂಕೇತ ಪ್ರದರ್ಶಿಸಿದರು. ತಮಿಳುನಾಡು ವಿಧಾನಸಭೆಯ ಎಲ್ಲಾ 234 ಸ್ಥಾನಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.
ಲೋಕಸಭೆಯಲ್ಲಿ ತೂತುಕುಡಿ ಕ್ಷೇತ್ರವನ್ನು ಪ್ರತಿನಿಧಿಸುವ ಕನ್ನಿಮೋಳಿ ಅವರು ಡಿಎಂಕೆ ಪರ ವ್ಯಾಪಕವಾಗಿ ಪ್ರಚಾರ ಮಾಡಿದ್ದರು.







