ಬುಧವಾರದಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಸತ್ಯಾಗ್ರಹ: 20 ಸಾವಿರ ಬಸ್‍ಗಳ ಕಾರ್ಯಾಚರಣೆ ಸ್ಥಗಿತ ಸಾಧ್ಯತೆ
ಇಂದು ಸಂಜೆಯಿಂದಲೇ ಬಸ್ ಸಂಚಾರ ವಿರಳ, ಪ್ರಯಾಣಿಕರ ಪರದಾಟ

ಬೆಂಗಳೂರು, ಎ.6: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರ ಸ್ಪಂದಿಸದ ಹಿನ್ನೆಲೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಸಾರಿಗೆ ನೌಕರರು ನಾಳೆಯಿಂದ(ಎ.7) ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿರುವ ಹಿನ್ನೆಲೆ ರಾಜ್ಯದೆಲ್ಲೆಡೆ ಸಾರ್ವಜನಿಕರಿಗೆ ಸಾರಿಗೆ ಬಸ್‍ಗಳ ಕೊರತೆಯ ಬಿಸಿ ತಟ್ಟಲಿದೆ.
ರಾಜ್ಯದ ಹಲವು ಬಸ್ ಘಟಕಗಳಲ್ಲಿ ಮಂಗಳವಾರ ಮಧ್ಯಾಹ್ನ ಪಾಳಿಯ ಬಸ್ ಚಾಲಕರು ಮತ್ತು ನಿರ್ವಾಹಕರು ಗೈರಾದ ಕಾರಣದಿಂದಾಗಿ ಇಲ್ಲಿನ ಬೆಂಗಳೂರಿನ ಕೆಬಿಎಸ್, ಹುಬ್ಬಳ್ಳಿ, ಬಿಜಾಪುರ, ಬೆಳಗಾವಿ ಒಳಗೊಂಡಂತೆ ವಿವಿಧ ಬಸ್ ನಿಲ್ದಾಣಗಳಿಂದ ಸಂಚಾರ ಮಾಡಬೇಕಿದ್ದ ಬಸ್‍ಗಳು ನಿಲ್ದಾಣಗಳಲ್ಲಿ ನಿಂತಿದ್ದವು. ಈ ವೇಳೆ ಬಸ್ಸಿಗಾಗಿ ಪ್ರಯಾಣಿಕರು ಪರದಾಟ ನಡೆಸುತ್ತಿದ್ದ ದೃಶ್ಯಗಳು ಕಂಡಬಂದವು. ಇನ್ನು, ರಾತ್ರಿ ಹೊರಡಬೇಕಿದ್ದ ಹಲವಾರು ಬಸ್‍ಗಳ ಸಂಚಾರವೂ ರದ್ದಾಗಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಗೊಂದಲಕ್ಕೀಡಾದರು ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಬಿಎಂಟಿಸಿಯ 6 ಸಾವಿರಕ್ಕೂ ಹೆಚ್ಚು ಬಸ್‍ಗಳು ಸೇರಿ ನಾಲ್ಕು ನಿಗಮಗಳ ಸುಮಾರು 20 ಸಾವಿರ ಬಸ್‍ಗಳ ಕಾರ್ಯಾಚರಣೆ ಬುಧವಾರ ಸ್ಥಗಿತವಾಗಲಿದೆ ಎನ್ನಲಾಗಿದ್ದು, ಇದರ ಪರಿಣಾಮ ಬಿಎಂಟಿಸಿಯ 30 ಲಕ್ಷ ಪ್ರಯಾಣಿಕರು ಸೇರಿ 1 ಕೋಟಿಯಷ್ಟು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಲಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಅನಿರ್ದಿಷ್ಟಾವಧಿ ಸತ್ಯಾಗ್ರಹ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬುಧವಾರದಿಂದ ಸಾರಿಗೆ ಮುಷ್ಕರ ನಡೆಸಲು ಉದ್ದೇಶಿಸಲಾಗಿದೆ. ಅಲ್ಲದೆ, ಯಾವುದೇ ಹೊಸ ಬೇಡಿಕೆಗಳನ್ನು ಸರಕಾರದ ಮುಂದೆ ಇಲ್ಲ. ಈ ಹಿಂದೆಯೇ ನೀಡಿದ್ದ ಭರವಸೆ ಈಡೇರಿಸದ ಕಾರಣ ಬೇರೆ ದಾರಿಯಿಲ್ಲದೆ ಹೋರಾಟದ ಹಾದಿ ಹಿಡಿದಿದ್ದೇವೆ. ಅಲ್ಲದೆ, ಹಲವು ಬೇಡಿಕೆಗಳು ಸಮರ್ಪಕವಾಗಿ ಈಡೇರಿಸಿಲ್ಲ ಎಂದು ಆರೋಪ ಮಾಡಿದರು.
ಯಾವ ತಪ್ಪಿಗಾಗಿ ನೌಕರರ ಮೇಲೆ ಎಸ್ಮಾ ಸೇರಿದಂತೆ ಕಠಿಣ ಕಾನೂನುಗಳನ್ನು ಹೇರಲಾಗಿದೆ ಎಂದ ಅವರು, ಅರ್ಧ ವೇತನಕ್ಕೆ ಸಾರಿಗೆ ನಿಗಮಗಳ ನೌಕರರು ಕೆಲಸ ಮಾಡುತ್ತಿದ್ದಾರೆ. ಅರೆ ಹೊಟ್ಟೆಯಲ್ಲಿರುವ ಅವರು ನ್ಯಾಯ ಕೇಳಿದರೆ ಸರಕಾರ ಎಸ್ಮಾ ಜಾರಿ ಮಾಡುವುದಾಗಿ ಹೇಳುತ್ತಿರುವುದು ಖಂಡನೀಯ ಎಂದರು.
ಅಧಿಕಾರಿಗಳು, ಮುಖ್ಯಮಂತ್ರಿಗಳಿಗಿಂತಲೂ ಮೇಲ್ಪಟ್ಟು ಕಾನೂನಿದೆ. ಆರೂವರೆ ಕೋಟಿ ಜನರಿದ್ದಾರೆ, ಅವರು ಎಲ್ಲವನ್ನೂ ನೋಡುತ್ತಿದ್ದಾರೆ. ಸರಕಾರ ಇದೇ ರೀತಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ ಅವರು, 6ನೇ ವೇತನ ಆಯೋಗ ಜಾರಿಗೊಳಿಸಿ ಅಧಿಕೃತವಾಗಿ ಘೋಷಣೆ ಮಾಡಿದರೆ ಮಾತ್ರ ಹೋರಾಟ ಹಿಂಪಡೆಯಲು ಸಾಧ್ಯ ಎಂದು ಕೋಡಿಹಳ್ಳಿ ನುಡಿದರು.
ಅನಗತ್ಯ ರಜೆಗೆ ಶಿಸ್ತು ಕ್ರಮ
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ವಾರದರಜೆ, ತುರ್ತುರಜೆ ಬಿಟ್ಟು ಎಲ್ಲ ನೌಕರರ ರಜೆಗಳನ್ನು ರದ್ದುಪಡಿಸಿದೆ. ಅನಗತ್ಯ ರಜೆ ಹಾಕಿದರೆ ವೇತನ ಕಡಿತ ಮಾಡುವ ಎಚ್ಚರಿಕೆಯನ್ನು ಕೆಎಸ್‌ಆರ್‌ಟಿಸಿ ನೀಡಿದ್ದು, ಎ.7ರಿಂದ ಅನಗತ್ಯವಾಗಿ ರಜೆ ಹಾಕಿದರೆ ವೇತನ ನೀಡಲ್ಲ ಎಂದು ಸುತ್ತೋಲೆ ಹೊರಡಿಸಿದೆ.
ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಈ ಆದೇಶ ಅನ್ವಯವಾಗಲಿದೆ. ಅನಗತ್ಯವಾಗಿ ರಜೆ ಹಾಕಿದರೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ. ಜತೆಗೆ, ಬಿಎಂಟಿಸಿ ಸಹ ನೌಕರರ ರಜೆ ರದ್ದುಗೊಳಿಸಿ ಎಂದು ಆದೇಶ ಹೊರಡಿಸಿದೆ.
‘ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಮ’
ಸಾರಿಗೆ ನೌಕರರ ಮುಷ್ಕರವನ್ನೇ ಗುರಿಯಾಗಿಸಿಕೊಂಡು ಖಾಸಗಿ ವಾಹನಗಳು ಪ್ರಯಾಣಿಕರ ಬಳಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಎಚ್ಚರಿಕೆ ನೀಡಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ವಾಹನಗಳು ಎಲ್ಲ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಿದ್ದೇವೆ. ಆದರೆ, ಇದನ್ನೇ ಲಾಭ ಮಾಡಿಕೊಂಡು ಪ್ರಯಾಣಿಕರ ಬಳಿಕ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಇನ್ನು, ಮುಷ್ಕರದ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಪರ್ಯಾಯ ಕ್ರಮ ಕೈಗೊಂಡಿದ್ದೇವೆ ಎಂದರು.
ನೌಕರರು ಪ್ರತಿಭಟನೆ ಕೈಬಿಡಬೇಕು
ಕೋವಿಡ್ ನೆಪವೊಡ್ಡಿ ಬೇರೆ ಬೇರೆ ರಾಜ್ಯಗಳಲ್ಲಿ ಸಾರಿಗೆ ಇಲಾಖೆಯ ನೌಕರರಿಗೆ ಶೇ.20ರಿಂದ ಶೇ.30ರಷ್ಟು ವೇತನ ಕಡಿತಗೊಳಿಸಿದ್ದಾರೆ. ಆದರೆ ನಾವು ಮಾಡಿಲ್ಲ. ನಾವು ಸಾರಿಗೆ ನೌಕರರರಿಗೆ ಸಂಬಳ ನೀಡಿದ್ದೇವೆ ಸಾರಿಗೆ ನೌಕರರು ಒಂಭತ್ತು ಬೇಡಿಕೆ ಇಟ್ಟಿದ್ದರು, ಅದರಲ್ಲಿ 8 ಬೇಡಿಕೆಗಳ ಈಡೇರಿಸಿದ್ದೇವೆ. ಹಾಗಾಗಿ, ನೌಕರರು ಪ್ರತಿಭಟನೆ ಕೈಬಿಡಬೇಕು.
-ಲಕ್ಷ್ಮಣ ಸವದಿ, ಸಾರಿಗೆ ಸಚಿವ
ಸೂಕ್ತ ವ್ಯವಸ್ಥೆ: ಸಿಎಂ
ನೌಕರರ ಮುಷ್ಕರಕ್ಕೆ ಸರಕಾರ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೆ, ಹಠ ಮಾಡದೇ ಸಾರಿಗೆ ನೌಕರರು ಮುಷ್ಕರ ಹಿಂಪಡೆಯಬೇಕು. ನಿಮ್ಮ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸರಕಾರ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ನೀಡಬೇಡಿ. ಮುಷ್ಕರ ಕೈಬಿಟ್ಟು ಸರಕಾರಕ್ಕೆ ಸಹಕಾರ ನೀಡಿ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ







