ದೇಶದಲ್ಲಿ ಕೋವಿಡ್-19 ಅತ್ಯಂತ ವೇಗವಾಗಿ ಹರಡುತ್ತಿದೆ: ಆರೋಗ್ಯ ಸಚಿವಾಲಯ ಕಳವಳ
‘ಸೋಂಕು ನಿಯಂತ್ರಣಕ್ಕೆ ಮುಂದಿನ 4 ವಾರ ನಿರ್ಣಾಯಕ’

ಹೊಸದಿಲ್ಲಿ,ಎ.6: ಭಾರತದಲ್ಲಿ ಕೋವಿಡ್-19 ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಅದು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಹರಡುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಚತ್ತೀಸ್‌ಗಢ ರಾಜ್ಯದಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆಯೆಂದು ಅದು ಹೇಳಿದೆ. ಕೋವಿಡ್ ನಿಯಂತ್ರಣಕ್ಕೆ ಮುಂದಿನ ನಾಲ್ಕು ವಾರಗಳು ಅತ್ಯಂತ ನಿರ್ಣಾಯಕವಾಗಿವೆ ಎಂದು ಅದು ಎಚ್ಚರಿಸಿದೆ.
ಮಹಾರಾಷ್ಟ್ರ, ಪಂಜಾಬ್ ಹಾಗೂ ಚತ್ತೀಸ್‌ಗಢಗಳಲ್ಲಿ ಕೋವಿಡ್-19 ಪ್ರಕರಣಗಳ ಪತ್ತೆ ಹಾಗೂ ಸೋಂಕಿತರ ಸಾವು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ. ‘‘ ಸೋಂಕಿನ ತೀವ್ರ ಹೆಚ್ಚಾಗಿದೆ ಹಾಗೂ ಅದು ಕಳೆದ ಸಲಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಅತ್ಯಂತ ವೇಗವಾಗಿ ಹರಡುತ್ತಿದೆ. ಕೆಲವು ರಾಜ್ಯಗಳಲ್ಲಿ ಅದರ ಪರಿಸ್ಥಿತಿ ಅತ್ಯಂತ ಬಿಗಡಾಯಿಸಿದೆ. ಆದರೆ ಸೋಂಕಿನ ಪ್ರಕರಣಗಳು ಹೆಚ್ಚಳವು ದೇಶಾದ್ಯಂತ ಕಂಡುಬರುತ್ತಿದೆ’’ ಎಂದವರು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುಣೆ,ಮುಂಬೈ,ಥಾಣೆ, ನಾಗಪುರ,ನಾಸಿಕ್, ಬೆಂಗಳೂರು ನಗರ, ಔರಂಗಾಬಾದ್,ಅಹ್ಮದ್‌ನಗರ, ದಿಲ್ಲಿ ಹಾಗೂ ಚತ್ತೀಸ್‌ಗಢದ ದುರ್ಗ್ ಕೊರೋನ ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿ ದಾಖಲಾಗಿರುವ ಜಿಲ್ಲೆಗಳಾಗಿವೆ.
ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಮಾತನಾಡಿ ಕೋವಿಡ್-19ನ ಎರಡನೆ ಅಲೆಯನ್ನು ನಿಯಂತ್ರಿಸಲು ಜನರ ಪಾಲ್ಗೊಳ್ಳುವಿಕೆಯು ಅತ್ಯಂತ ಮಹತ್ವದ್ದಾಗಿದೆ. ಮುಂದಿನ ನಾಲ್ಕು ವಾರಗಳು ಅತ್ಯಂತ ನಿರ್ಣಾಯಕವಾಗಿವೆ. ಇಡೀ ದೇಶವು ಜೊತೆಗೂಡಿ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಶ್ರಮಿಸಬೇಕೆಂದು ಅವರು ಹೇಳಿದರು.
‘‘ಆದಾಗ್ಯೂ ಜನಸಂಖ್ಯಾ ಗಾತ್ರ ಹಾಗೂ ಪ್ರತಿ 10 ಲಕ್ಷಕ್ಕೆ ಆಗಿರುವ ಸಾವಿನ ಸಂಖ್ಯೆಗಳಿಗೆ ಹೋಲಿಸಿದರೆ ನಮ್ಮ ನಿರ್ವಹಣೆ ಚೆನ್ನಾಗಿದೆ ಹಾಗೂ ಸೋಂಕಿನ ಹರಡುವಿಕೆ ನಿಯಂತ್ರಣದಲ್ಲಿದೆ ’’ಎಂದು ಅವರು ತಿಳಿಸಿದರು.
ಕೋವಿಡ್ 19 ಪ್ರಕರಣಗಳ ಹೆಚ್ಚಳವಾಗುತ್ತಿರುವ ಜಿಲ್ಲೆಗಳಲ್ಲಿ ಕೇಂದ್ರ ಸರಕಾರವು 50 ಉನ್ನತ ಮಟ್ಟದ ಆರೋಗ್ಯ ತಂಡಗಳನ್ನು ರಚಿಸಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೋನ ಸೋಂಕು ಆರಂಭವಾದಾಗಿನಿಂದ ಸೋಮವಾರ ಇದೇ ಮೊದಲ ಬಾರಿಗೆ ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿತ್ತು. ಕೋವಿಡ್-19 ಸೋಂಕಿನ ಪ್ರಕರಣಗಳು ಅತ್ಯಂತ ಸಕ್ರಿಯವಾಗಿರುವ ಟಾಪ್ 10 ಜಿಲ್ಲೆಗಳಲ್ಲಿ ಚತ್ತೀಸ್‌ಗಢದ ದುರ್ಗ್ ಕೂಡಾ ಒಂದಾಗಿದೆ. ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕದ ಬೆಂಗಳೂರು ನಗರದ ಕೊರೋನ ಸೋಂಕಿನ ಅತ್ಯಧಿಕ ಪ್ರಕರಣಗಳು ದಾಖಲಾಗಿರುವ ಇತರ ಜಿಲ್ಲೆಗಳ ಪಟ್ಟಿಯಲ್ಲಿ ಪ್ರಮುಖವಾಗಿವೆ.







