ರಾಜಕೀಯ ಅಸ್ಥಿರತೆ ಸೃಷ್ಟಿಸಲು ಸಿಎಎ, ಕೃಷಿ ಕಾನೂನಿನ ವಿರುದ್ಧ ಅಪಪ್ರಚಾರ: ಪ್ರಧಾನಿ ಮೋದಿ ಆರೋಪ

ಹೊಸದಿಲ್ಲಿ,ಎ.6: ದೇಶದಲ್ಲಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸಲು ತನ್ನ ಸರಕಾರದ ಕೃಷಿ ಕಾನೂನು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತಿತರ ಮಸೂದೆಗಳ ಬಗ್ಗೆ ಹುಸಿ ನಿರೂಪಣೆ ಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಪಾದಿಸಿದ್ದಾರೆ.
ಭಾರತೀಯ ಜನತಾಪಕ್ಷದ 41ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಕೇಂದ್ರ ಸರಕಾರದ ಕಾಯ್ದೆಗಳ ಕುರಿತಾಗಿ ಹರಡಲಾಗುತ್ತಿರುವ ಹುಸಿ ವ್ಯಾಖ್ಯಾನಗಳ ಹಿಂದೆ ದುರುದ್ದೇಶಪೂರ್ವಕವಾಗಿ ವದಂತಿಗಳನ್ನು ದೇಶಾದ್ಯಂತ ಹರಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಇತರ ಸನ್ನಿವೇಶಗಳಲ್ಲಿ ಮೀಸಲಾತಿಯನ್ನು ರದ್ದುಪಡಿಸ ಲಾಗುತ್ತದೆಯೆಂದು ಗುಲ್ಲೆಬ್ಬಿಸಲಾಗುತ್ತದೆ. ಆದರೆ ಅವೆಲ್ಲವೂ ಅಪ್ಪಟ ಸುಳ್ಳುಗಳಾಗಿವೆ’’ ಎಂದರು.
ಇಂತಹ ಸುಳ್ಳು ನಿರೂಪಣೆಗಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಜಾಗೃತರಾಗಿರಬೇಕು ಹಾಗೂ ಜನತೆಗೆ ಆ ಬಗ್ಗೆ ಮಾಹಿತಿ ನೀಡಬೇಕು ಎಂದವರು ಕರೆ ನೀಡಿದರು.
ಬಿಜೆಪಿಯನ್ನು ಚುನಾವಣೆ ಗೆಲ್ಲುವ ಯಂತ್ರವೆಂದು ಕರೆಯುತ್ತಿರುವುದಕ್ಕಾಗಿ ಪ್ರತಿಪಕ್ಷಗಳನ್ನು ಪ್ರಧಾನಿ ಟೀಕಿಸಿದರು. ‘‘ ಬಿಜೆಪಿಯ ಪ್ರಚಾರವು ಜನತೆಯ ಹೃದಯವನ್ನು ಗೆದ್ದಿದೆಯೆಂಬುದು ಸತ್ಯ’’ ಎಂದರು. ‘‘ ಬಿಜೆಪಿಯನ್ನು ಚುನಾವಣೆ ಗೆಲ್ಲುವ ಯಂತ್ರವೆಂದು ಹೇಳುವವರು ಭಾರತದ ಜನತೆಯ ಆಶೋತ್ತರಗಳನ್ನು ಅರಿತುಕೊಂಡಿಲ್ಲವೆಂದು’’ ಪ್ರಧಾನಿ ಪ್ರತಿಪಕ್ಷಗಳ ವಿರುದ್ಧ ಚಾಟಿ ಬೀಸಿದರು.
ಸ್ಥಳೀಯ ಆಶೋತ್ತರಗಳ ಈಡೇರಿಕೆಯ ಗುರಿಯೊಂದಿಗೆ ಸ್ಥಾಪನೆಯಾದ ಪಕ್ಷಗಳು ಕ್ರಮೇಣ ಕುಟುಂಬ ಆಧಾರಿತ ಪಕ್ಷಗಳಾಗಿ ಬಿಟ್ಟಿವೆ ಎಂದವರು ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸದೆ ಹೇಳಿದರು.
ಪಕ್ಷಕ್ಕಿಂತ ದೇಶ ದೊಡ್ಞದು ಎಂಬುದಾಗಿ ಬಿಜೆಪಿ ನಂಬಿದೆ, ಈ ಪರಂಪರೆಯು ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಕಾಲದಿಂದ ಆರಂಭಗೊಂಡಿದ್ದು, ಈಗಲೂ ಮುಂದುವರಿದಿದೆ ಎಂದು ಪ್ರಧಾನಿ ಹೇಳಿದರು.







