'ಪಂಚಮಸಾಲಿ ಮೀಸಲಾತಿ' ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ: ವಿಜಯಾನಂದ ಕಾಶಪ್ಪನವರ್
ವಿಜಯಪುರ, ಎ.6: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹ ವಿಚಾರದಲ್ಲಿ ಸಿಎಂ ಬಿಎಸ್‍ವೈ ಅವರು 6 ತಿಂಗಳು ಸಮಯ ಕೇಳಿದ್ದು, ಆ ಸಮಯದೊಳಗೆ ಬೇಡಿಕೆ ಈಡೇರಿಸದಿದ್ದರೆ ಅ.15ರಿಂದ ಮತ್ತೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ಮಂಗಳವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮುರುಗೇಶ್ ನಿರಾಣಿ ಅವರು ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ತಮ್ಮ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಅವರು ಯಾವುದರಲ್ಲಿ ಉತ್ತಮರಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಅಲ್ಲದೆ, ಅನೇಕ ಹಿರಿಯರು ಮನವಿ ಮಾಡಿಕೊಂಡಿದ್ದರಿಂದ ಅವರಿಗೆ ಗೌರವ ಕೊಟ್ಟು ಹೋರಾಟ ನಿಲ್ಲಿಸಿದ್ದೇವೆ. ನಮ್ಮ ಅಂತಿಮ ಹೋರಾಟ ಮಾಡು ಇಲ್ಲವೆ ಮಡಿಯ ರೀತಿ ಇರುತ್ತದೆ. ಇದನ್ನು ಮುರುಗೇಶ್ ನಿರಾಣಿ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕೆಂದು ಒತ್ತಾಯಿಸಿ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜನೆಗೊಂಡಿತ್ತು. ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಬಸವಜಯ ಮೃತ್ಯುಂಜಯ ಶ್ರೀಗಳು ಧರಣಿ ಸತ್ಯಾಗ್ರಹ ನಡೆಸಿದ್ದರು





