ಮತಗಟ್ಟೆಗೆ ಅತಿಕ್ರಮಣ ಪ್ರವೇಶ: ಶ್ರುತಿ ಹಾಸನ್ ವಿರುದ್ಧ ಪ್ರಕರಣ ದಾಖಲಿಸಿದ ಬಿಜೆಪಿ

ಚೆನ್ನೈ: ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ತನ್ನ ತಂದೆಯೊಂದಿಗೆ ಮತಗಟ್ಟೆಗೆ ಭೇಟಿ ನೀಡುವಾಗ ಮತದಾನ ಕೇಂದ್ರದೊಳಗೆ ಅತಿಕ್ರಮಣ ಮಾಡಿದ್ದಾರೆಂದು ಆರೋಪಿಸಿ ಮಕ್ಕಳ್ ನೀಧಿ ಮೈಯಂ(ಎಂಎನ್ ಎಂ)ಮುಖ್ಯಸ್ಥ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.
ಕಮಲ್ ಹಾಸನ್ ತಮ್ಮ ಪುತ್ರಿಯರಾದ ಶ್ರುತಿ ಹಾಗೂ ಅಕ್ಷರಾ ಅವರೊಂದಿಗೆ ಚೆನ್ನೈನಲ್ಲಿ ಮತ ಚಲಾಯಿಸಿದ ನಂತರ ನೇರವಾಗಿ ಕೊಯಮತ್ತೂರು ದಕ್ಷಿಣಕ್ಕೆ ತೆರಳಿದ್ದರು. ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕಮಲ್ ಹಾಸನ್ ಮಂಗಳವಾರ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಮತದಾನದ ಬಗ್ಗೆ ಮಾಹಿತಿ ಪಡೆದಿದ್ದರು. ತಮಿಳುನಾಡು ಚುನಾವಣೆಯಲ್ಲಿ ಗೆದ್ದ ನಂತರ ಮತದಾರರಿಗೆ ಹಣವನ್ನು ವಿತರಿಸುವ ಭರವಸೆಯನ್ನು ಬಿಜೆಪಿ ನೀಡಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಕಮಲ್ ಹಾಸನ್ ದೂರು ನೀಡಿದರು.
ಕೊಯಮತ್ತೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಬಿಜೆಪಿ ರಾಷ್ಟ್ರೀಯ ಮಹಿಳಾ ವಿಭಾಗದ ನಾಯಕಿ ವನತಿ ಶ್ರೀನಿವಾಸನ್ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನಂದಕುಮಾರ್ ಅವರು ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ್ದಕ್ಕಾಗಿ ನಟಿ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬೂತ್ ಏಜೆಂಟರನ್ನು ಹೊರತುಪಡಿಸಿ ಬೇರೆ ಯಾರೂ ಮತದಾನ ಕೇಂದ್ರಗಳಿಗೆ ಹೋಗಬಾರದು ಎಂಬ ನಿಯಮವಿದೆ ಎಂದು ಬಿಜೆಪಿ ತಿಳಿಸಿದೆ.