ತಮ್ಮ ವಶದಲ್ಲಿರುವ ಯೋಧನ ಚಿತ್ರವನ್ನು ಬಿಡುಗಡೆ ಮಾಡಿದ ಮಾವೋವಾದಿಗಳು

ರಾಯ್ಪುರ: ಮಾವೋವಾದಿಗಳು ತಮ್ಮ ವಶದಲ್ಲಿರುವ ಕೋಬ್ರಾ ಘಟಕದ ಯೋಧನ ಚಿತ್ರವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.
ನಿಷೇಧಿತ ಸಂಘಟನೆ ದಂಡಕಾರಣ್ಯ ವಿಶೇಷ ವಲಯ ಸಮಿತಿ(ಡಿಎಸ್ ಝೆಡ್ ಸಿ) ಯೋಧನನ್ನು ಹಸ್ತಾಂತರಿಸಲು ಸರಕಾರವು ಈಡೇರಿಸಬೇಕಾದ ಬೇಡಿಕೆ ಕುರಿತಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಒಂದು ದಿನದ ನಂತರ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಮಾವೋವಾದಿಗಳು ಬಿಡುಗಡೆ ಮಾಡಿದ ಚಿತ್ರದಲ್ಲಿ ಕೋಬ್ರಾ ಘಟಕದ ಯೋಧ ರಾಕೇಶ್ವರ ಸಿಂಗ್ ಮನ್ವಾಸ್ ಅವರು ತಾತ್ಕಾಲಿಕ ಆಶ್ರಯದಲ್ಲಿ ಪ್ಲಾಸ್ಟಿಕ್ ಚಾಪೆಯ ಮೇಲೆ ಕುಳಿತಿದ್ದಾರೆ. ಇದು ಮಾವೋವಾದಿಗಳ ಶಿಬಿರವಾಗಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಯೋಧನೊಬ್ಬ ಮಾವೋವಾದಿಗಳ ವಶದಲ್ಲಿರುವ ಕುರಿತು ಸೋಮವಾರ ಸ್ಥಳೀಯ ಪತ್ರಕರ್ತನಿಗೆ ಮೊದಲು ಮಾಹಿತಿ ಲಭಿಸಿತ್ತು. ಈ ವಿಚಾರವನ್ನು ಮಾವೋವಾದಿಗಳು ಮಂಗಳವಾರ ದೃಢಪಡಿಸಿದ್ದಾರೆ.
ಸರಕಾರವು ಸಂವಾದಕರ ಹೆಸರನ್ನು ಘೋಷಿಸಬೇಕು. ಆ ನಂತರ ನಾವು ನಮ್ಮ ವಶದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಬಿಡುಗಡೆ ಮಾಡುತ್ತೇವೆ. ಅಲ್ಲಿಯವರೆಗೆ ಅವರು ನಮ್ಮ ಭದ್ರತೆಯಡಿಯಲ್ಲಿ ಸುರಕ್ಷಿತವಾಗಿರುತ್ತಾರೆ ಎಂದು ಡಿಎಸ್ ಝೆಡ್ ಸಿ ವಕ್ತಾರ ವಿಕಲ್ಪ್ ತಿಳಿಸಿದ್ದಾರೆ.
ಸುಕ್ಮಾ-ಬಿಜಾಪುರ ಗಡಿಯಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವೆ ಎಪ್ರಿಲ್ 3ರಂದು ನಡೆದ ಗುಂಡಿನ ಕಾಳಗದಲ್ಲಿ ಮನ್ಹಾಸ್ ಕಾಣೆಯಾಗಿದ್ದರು. ಆನಂತರ 22 ಭದ್ರತಾ ಸಿಬ್ಬಂದಿಗಳ ಮೃತದೇಹಗಳು ಪತ್ತೆಯಾಗಿದ್ದವು.







