ಮಾಜಿ ಮುಂಬೈ ಪೊಲೀಸ್ ಆಯುಕ್ತರನ್ನು ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ

ಮುಂಬೈ: ಮುಖೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಒಡ್ಡಿದ ಪ್ರಕರಣದ ಬಗ್ಗೆ ಸುಮಾರು ಒಂದು ತಿಂಗಳಿನಿಂದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಬುಧವಾರ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಸಚಿನ್ ವಾಝೆ ಹಾಗೂ ಇತರ ಮುಂಬೈ ಪೊಲೀಸರಿಗೆ ಸಂಬಂಧಪಟ್ಟಂತೆ ಭ್ರಷ್ಟಾಚಾರದ ಎಲ್ಲಾ ಪುರಾವೆಗಳನ್ನು ಸಿಬಿಐಗೆ ಹಸ್ತಾಂತರಿಸುವುದಾಗಿ ಎನ್ ಐಎ ತಿಳಿಸಿದೆ. ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಸಿಂಗ್ ಅವರ ಭ್ರಷ್ಟಾಚಾರದ ಆರೋಪದ ಬಗ್ಗೆ ಸಿಬಿಐ ಕಳೆದ ರಾತ್ರಿ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿತು.
ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರಿಗೆ 16 ವರ್ಷಗಳ ಬಳಿಕ ಮತ್ತೆ ಜವಾಬ್ದಾರಿ ನೀಡಿರುವ ಕುರಿತಾಗಿ ಸಿಂಗ್ ಅವರನ್ನು ಪ್ರಶ್ನಿಸಲಾಗಿದೆ ಎಂದು ಎನ್ಐಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಝೆ ಅವರನ್ನು ಅಪರಾಧ ಶಾಖೆಗೆ ಪೋಸ್ಟಿಂಗ್ ಮಾಡಿರುವುದು ಮತ್ತು ಅವರನ್ನು ನಿಯೋಜಿಸಲಾದ ಪ್ರಕರಣಗಳ ಬಗ್ಗೆಯೂ ಸಿಂಗ್ ಅವರನ್ನು ಪ್ರಶ್ನಿಸಲಾಯಿತು.