ಕೋವಿಡ್ ಸುರಕ್ಷಾ ನಿಯಮಗಳ ಪಾಲನೆ ಕಡ್ಡಾಯವಾಗಲಿ: ಡಾ.ಎಂ.ನಾಯಕ್

ಉಡುಪಿ, ಎ.7: ಕಳೆದ ವರ್ಷದಿಂದ ಇಡೀ ವಿಶ್ವ ಕೊರೋನಾ ಮಾರಕ ವೈರಸ್‌ಗೆ ತುತ್ತಾಗಿದ್ದು, ಪ್ರಸುತ್ತ ಕೋವಿಡ್‌ಗೆ ಲಸಿಕೆ ಲಭ್ಯವಿದೆ. ಸಾರ್ವಜನಿಕರು ಕೊರೋನಾ ಲಸಿಕೆ ತೆಗೆದುಕೊಳ್ಳವುದರ ಜೊತೆಗೆ ಮಾಸ್ಕ್‌ಧಾರಣೆ, ಕೈಗಳ ಸ್ವಚ್ಛತೆಗೆ ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷತಾ ಅಂತರ ಕಾಪಾಡಿಕೊಂಡು ಕೋವಿಡ್ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ಹೇಳಿದ್ದಾರೆ.
ಅಜ್ಜರಕಾಡಿನಲ್ಲಿರುವ ರೆಡ್‌ಕ್ರಾಸ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ವತಿಯಂದ ಆಯೋಜಿಸಿದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ ವರ್ಷ ಕೋವಿಡ್ ಸಮಯದಲ್ಲಿ ರಕ್ತದಾನ ಶಿಬಿರಗಳು ನಡೆಯದ ಕಾರಣ ಜಿಲ್ಲೆಯಲ್ಲಿ ರಕ್ತ ಶೇಖರಣೆಯಲ್ಲಿ ಕೊರತೆ ಉಂಟಾಗಿತ್ತು. ಆದರೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದ ಕೊರತೆ ನೀಗಿಸುವಲ್ಲಿ ನೆರವಾಗಿದ್ದು, ಕೋವಿಡ್ ಸಮಯದಲ್ಲಿ ಅನೇಕ ಸಾಮಾಜಿಕ ಸೇವೆಗಳನ್ನು ನೀಡುತ್ತಾ ಬಂದಿದೆ ಎಂದು ಜಿಲ್ಲಾ ಸರ್ಜನ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆದ್ದರಿಂದ ಉಪಯುಕ್ತ ವಾದ ಆಹಾರ ಸೇವನೆ ಮಾಡುವುದು ಒಳಿತು.ಅದೇ ರೀತಿ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಧನ್ವಂತರಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಲೀಲಾವತಿ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಉಪ ಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ, ಖಜಾಂಜಿ ಡಾ.ಅರವಿಂದ ನಾಯಕ್ ಅಮ್ಮುಂಜೆ ವಂದಿಸಿದರು.







