‘ರಾಜಕಾರಣಿಗಳಿಗೆ ನಮ್ಮ ಕಷ್ಟ ಅರ್ಥವಾಗುವುದಿಲ್ಲ’ : ಉಡುಪಿ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಕಣ್ಣೀರಿಟ್ಟ ವಿಡಿಯೋ ವೈರಲ್

ಉಡುಪಿ, ಎ.7: ರಾಜಕಾರಣಿಗಳ ಹಾಗೂ ಡಿಪೋ ಮೆನೇಜರ್ ವಿರುದ್ಧ ಆರೋಪ ಹೊರಿಸಿ ಕಣ್ಣೀರು ಹಾಕಿದ ಉಡುಪಿ ಕೆಎಸ್‌ಆರ್‌ಟಿಸಿ ಡಿಪೋ ಮೆಕ್ಯಾನಿಕ್ ಶ್ರೀಕಾಂತ್ ರೆಡ್ಡಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ.
‘ಕಳೆದ ರಾತ್ರಿಯಿಂದ ನನ್ನನ್ನು ಡಿಪೋದಲ್ಲಿ ಮ್ಯಾನೇಜರ್ ಕೂಡಿ ಹಾಕಿದ್ದಾರೆ. ನಾನು ಪ್ರತಿಭಟನೆ ಮಾಡುತ್ತೇನೆ ಎಂದರೂ ಬಿಡುತ್ತಿಲ್ಲ. ಪ್ರತಿಭಟನಾರ್ಥವಾಗಿ ನಾನು ಬೆಳಗ್ಗೆನಿಂದ ನಿರಂತರ ಕೆಲಸ ಮಾಡುತ್ತಿದ್ದೇನೆ. ನಿನ್ನ ಕೇಸು ಕ್ಲಿಯರ್ ಆಗಬೇಕಾದರೆ ನೀನು ಕೆಲಸ ಮಾಡಲೇ ಬೇಕು ಎಂದು ಡಿಪೋ ಮ್ಯಾನೇಜರ್ ಬೆದರಿಕೆ ಹಾಕಿದ್ದಾರೆ. ನಾನು ಬಡವ ಅದಕ್ಕೆ ಕೆಲಸ ಮಾಡುತ್ತಿದ್ದೇನೆ ಎಂದು ಶ್ರೀಕಾಂತ್ ರೆಡ್ಡಿ ಮಾಧ್ಯಮದ ಮುಂದೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ನನ್ನ ಬಳಿ ಹಣ ಇರುತ್ತಿದ್ದರೆ ನಾನು ಎಂಎಲ್ಎ ಆಗುತ್ತಿದೆ. ಕೆಎಸ್‌ಆರ್‌ಟಿಸಿ ಅನ್ನ ತಿನ್ನುವುದರಿಂದ ನಿಯತ್ತಿನಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ನಿಯತ್ತಿನ ಕೆಲಸಕ್ಕೆ ಸೂಕ್ತ ಸಂಬಳ ಕೊಡಿ. ನಾನು ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ತರ ಎಸಿ ಕಾರಿನಲ್ಲಿ ಕೂತು ಎಸಿ ಕಚೇರಿಯಲ್ಲಿ ಕೂತು ಕೆಲಸ ಮಾಡುತ್ತಿಲ್ಲ. ಅರ್ಚಕರಿಗೆ ಆರನೇ ವೇತನ ಆಯೋಗದ ಸಂಬಳ ಕೊಡುತ್ತಾರೆ. ನಾವೇನು ಸತ್ತಿದ್ದೀವಾ ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಇಲ್ಲಿ ಬ್ಲಾಕ್ ಮಾಡಿ ಡ್ಯೂಟಿ ಮಾಡಿಸಲಾಗುತ್ತಿದೆ. ಸ್ಟ್ರೈಕ್ ದಿನವೂ ನಾನು ಯಾಕೆ ಡ್ಯೂಟಿ ಮಾಡುತ್ತಿದ್ದೇನೆ ಎಂದು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ ? ಮ್ಯಾನೇಜರ್ ನನ್ನನ್ನು ಬೆಳಗ್ಗೆ ಲಾಕ್ ಮಾಡಿ ಹೊರಗೆ ಹೋಗದಂತೆ ತಡೆದಿದ್ದಾರೆ. ನಾನು ಅನಾರೋಗ್ಯ ಇದ್ದಾಗ ರಜೆ ಮಾಡಿದ್ದೆ. ಆ ಕೇಸ್ ಕ್ಲಿಯರ್ ಆಗುವ ವರೆಗೆ ಡ್ಯೂಟಿ ಮಾಡಬೇಕು ಎಂದು ಭಯ ಹುಟ್ಟಿಸಿದ್ದಾರೆ. ನನಗೆ ಭಯ ಹುಟ್ಟಿಸಿದ್ದರಿಂದ ನಾನು ಇಲ್ಲಿ ಡ್ಯೂಟಿ ಮಾಡುತ್ತಿದ್ದೇನೆ. ನನಗೆ ಈ ಸಂಸ್ಥೆ ಬಿಟ್ಟು ಬೇರೆ ಏನು ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ನಮಗೆ ಆರನೇ ವೇತನ ಆಯೋಗದ ಸೌಲಭ್ಯ ಯಾಕೆ ಬೇಕು ಗೊತ್ತಾ? ನಮ್ಮ ಬಳಿ ಹಣವಿಲ್ಲ. ಅದಕ್ಕಾಗಿ ಸಂಬಳ ಏರಿಕೆ ಕೇಳುತ್ತಿದ್ದೇವೆ. ಶ್ರೀಮಂತ ರಾಜಕಾರಣಿಗಳಿಗೆ ನಮ್ಮ ಕಷ್ಟ ಅರ್ಥವಾಗುವುದಿಲ್ಲ. ನಾವು ಮತ ಹಾಕಿರುವುದ ರಿಂದ ಇವರೆಲ್ಲ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹತ್ತಿರ ಹಣವಿದ್ದರೆ ನಾನೇ ರಾಜಕಾರಣ ಮಾಡುತ್ತಿದ್ದೆ ಎಂದು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದರು.
ಡಿಪೋ ಮ್ಯಾನೇಜರ್ ಸ್ಪಷ್ಟನೆ
ಈ ಬಗ್ಗೆ ಸ್ಪಷ್ಟನೆ ನೀಡಿದ ಡಿಪೋ ಮ್ಯಾನೇಜರ್ ಉದಯ ಕುಮಾರ್, ಇಂದು ನಮ್ಮ ಘಟಕದಲ್ಲಿ ಯಾವುದೇ ರೀತಿಯ ತಾಂತ್ರಿಕ ಸಿಬ್ಬಂದಿಗಳು ವರದಿ ಮಾಡಿಲ್ಲ. ಚಾಲನಾ ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಬಂದಿಲ್ಲ. ಹಾಗಿದ್ದರೂ ಮೆಕಾನಿಕ್ ಶ್ರೀಕಾಂತ್ ರೆಡ್ಡಿ ಒಬ್ಬನೇ ಬಂದು ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಶ್ರೀಕಾಂತ ರೆಡ್ಡಿ ಓರ್ವ ಮದ್ಯ ವ್ಯಸನಿ. ಪದೇಪದೇ ಕರ್ತವ್ಯಕ್ಕೆ ಗೈರು ಹಾಜ ರಾಗುವ ಪ್ರವೃತ್ತಿ ಉಳ್ಳವ. ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕಟ್ಟುಕಥೆಗಳನ್ನು ಆತ ಹೇಳಿದ್ದಾನೆ. ಸಂಸ್ಥೆಯ ಹೆಸರು ಹಾಳು ಮಾಡಲು ಈ ರೀತಿಯ ಹೇಳಿಕೆ ನೀಡಿದ್ದಾನೆ. ನಾನು ಆತನ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.







