ವಿದ್ಯಾರ್ಥಿಯ ಗುಡಿಸಲಿಗೆ ಸೋಲಾರ್ ಲ್ಯಾಂಪ್ ವಿತರಿಸಿದ ಡಿಡಿಪಿಐ

ಉಡುಪಿ, ಎ.7: ಎಸೆಸೆಲ್ಸಿ ವಿದ್ಯಾರ್ಥಿಗಳ ಪಾಲಕರ ಮನೆ ಭೇಟಿ ಕಾರ್ಯ ಕ್ರಮದ ಸಂದರ್ಭದಲ್ಲಿ ವಿದ್ಯುತ್ ದೀಪ ಇಲ್ಲದೆ ಕಂದೀಲು ಬೆಳಕಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಗುಡಿಸಲಿಗೆ ಸೋಲಾರ್ ಲ್ಯಾಂಪ್‌ನ್ನು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿಯ ಕುಮಾರ ಮಂಜು, ಉಡುಪಿ ಬೋರ್ಡ್ ಹೈಸ್ಕೂಲ್‌ನ ಎಸೆಸೆಲ್ಸಿ ತರಗತಿಯಲ್ಲಿ ಓದು ತ್ತಿದ್ದು, ಈತ ಉಡುಪಿ ಬನ್ನಂಜೆಯ ಗುಡಿಸಿಲಲ್ಲಿ ವಾಸವಾಗಿದ್ದಾನೆ. ಈತ ಪೋಷಕರು ತಮ್ಮ ಊರಿನಲ್ಲಿಯೇ ಇದ್ದಾರೆ.
ಈ ಗುಡಿಸಲಿಗೆ ವಿದ್ಯುತ್ ಬೆಳಕು ಇಲ್ಲದ ಕಾರಣ ಮಂಜು, ಕಂದೀಲು ಬೆಳಕಿನಲ್ಲಿ ಓದುತ್ತಿರುವುದು ಒಂದು ವಾರದ ಹಿಂದೆ ಮನೆ ಭೇಟಿ ಕಾರ್ಯ ಕ್ರಮದ ಸಂದರ್ಭದಲ್ಲಿ ಡಿಡಿಪಿಐ ಗಮನಿಸಿದ್ದರು. ಆ ದಿನ ಡಿಡಿಪಿಐ ಆ ವಿದ್ಯಾರ್ಥಿಗೆ ಸೋಲಾರ್ ಲ್ಯಾಂಪ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ವಿದ್ಯಾರ್ಥಿಗೆ ಓದಲು ಅನುಕೂಲ ಆಗಲು ಡಿಡಿಪಿಐ ಸೆಲಾರ್ ಲ್ಯಾಂಪ್ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಭಟ್, ಉಡುಪಿ ತಾಲೂಕು ದೈಹಿಕ ವಿಷಯ ಪರಿವೀಕ್ಷಕ ವಿಶ್ವನಾಥ ಬಾಯರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಿನಕರ ಅಂಪಾರು, ಬಿಆರ್ಸಿಓ ಉಮಾ, ಇಸಿಓ ಪವನ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.







