ಚೆಕ್ ಅಮಾನ್ಯ ಪ್ರಕರಣ: ನಟ ಶರತ್ ಕುಮಾರ್, ಪತ್ನಿ ರಾಧಿಕಾಗೆ 1 ವರ್ಷ ಕಾರಾಗೃಹ ಶಿಕ್ಷೆ
ಚಂಡಿಗಢ, ಎ. 7: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ನಟ ಹಾಗೂ ಸಮತ್ವ ಮಕ್ಕಳ್ ಕಚ್ಚಿ ನಾಯಕ ಶರತ್ ಕುಮಾರ್ ಹಾಗೂ ಅವರ ಪತ್ನಿ ರಾಧಿಕಾ ಅವರನ್ನು ಸಂಸದರು ಹಾಗೂ ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಬುಧವಾರ ದೋಷಿ ಎಂದು ಪರಿಗಣಿಸಿದೆ ಹಾಗೂ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 5 ಕೋಟಿ ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿದೆ.
ಶರತ್ ಕುಮಾರ್, ರಾಧಿಕಾ ಹಾಗೂ ಲಿಸ್ಟಿನ್ ಸ್ಟಿಫನ್ ಪಾಲುದಾರರಾಗಿರುವ ಮ್ಯಾಜಿಕ್ ಫಾರ್ಮಸ್ ಕಂಪೆನಿ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ 1.50 ಕೋಟಿ ರೂಪಾಯಿ ಸಾಲ ಪಡೆದಿತ್ತು ಹಾಗೂ ಎರಡು ಚೆಕ್‌ಗಳನ್ನು ನೀಡಿತ್ತು. ಅನಂತರ ಶರತ್ ಕುಮಾರ್ ಅವರು ರೆಡಿಯನ್ಸ್ ಕಂಪೆನಿಯಿಂದ 50 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದಕ್ಕೆ 10 ಲಕ್ಷದ 5 ಚೆಕ್‌ಗಳನ್ನು ನೀಡಿದ್ದರು. ಆದರೆ, ಈ ಚೆಕ್‌ಗಳನ್ನು ಬ್ಯಾಂಕ್‌ನಲ್ಲಿ ಸಲ್ಲಿಸಿದಾಗ ಅದು ಅಮಾನ್ಯಗೊಂಡಿತ್ತು ಎಂದು ಆರೋಪಿಸಿ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.
ಈ ಹಿಂದೆ ಶರತ್ ಕುಮಾರ್ ದಂಪತಿ ಸೈದಪೇಟ್ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ತನ್ನ ವಿರುದ್ಧ ಆರಂಭಿಸಿರುವ ಕ್ರಿಮಿನಲ್ ಕಲಾಪ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ, 2019 ಮೇಯಲ್ಲಿ ಶರತ್ ಕುಮಾರ್, ರಾಧಿಕಾ ಹಾಗೂ ಇತರ ಇಬ್ಬರ ವಿರುದ್ಧದ ಬಾಕಿ ಇರುವ ಎರಡು ಚೆಕ್ ಅಮಾನ್ಯ ಪ್ರಕರಣದ ಕ್ರಿಮಿನಲ್ ಕಲಾಪವನ್ನು ರದ್ದುಗೊಳಿಸಲು ನಿರಾಕರಿಸಿತ್ತು.
ಈ ಪ್ರಕರಣದ ವಿಚಾರಣೆಯನ್ನು 6 ತಿಂಗಳ ಒಳಗೆ ಪೂರ್ಣಗೊಳಿಸುವಂತೆ ನ್ಯಾಯಮೂರ್ತಿ ಸೈದಪೇಟ್‌ನ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದರು. ಈ ನಡುವೆ ಈ ಪ್ರಕರಣವನ್ನು ಚೆನ್ನೈಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದ, ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.