ಎ. 11ರಿಂದ ಕೆಲಸದ ಸ್ಥಳದಲ್ಲೇ ಕೋವಿಡ್ ಲಸಿಕೆ : ಕೇಂದ್ರ ಆರೋಗ್ಯ ಸಚಿವಾಲಯ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಸಮರಕ್ಕೆ ವೇಗ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಅಂಗವಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲೇ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಆದರೆ ಇಲ್ಲೂ 45 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಹಾಗೂ ಉದ್ಯೋಗ ಸ್ಥಳದಲ್ಲಿ ಉದ್ಯೋಗಿಗಳ ಕುಟುಂಬದವರು ಸೇರಿದಂತೆ ಹೊರಗಿನವರಿಗೆ ಲಸಿಕೆ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಪಪಡಿಸಿದೆ.
ಲಸಿಕೆ ಅಭಿಯಾನವನ್ನು ಹೆಚ್ಚು ಜನಕೇಂದ್ರಿತವಾಗಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕತೆಯಲ್ಲಿ ದೊಡ್ಡ ಸಂಖ್ಯೆಯ ಉದ್ಯೋಗಿಗಳು 45 ವರ್ಷ ಮೇಲ್ಪಟ್ಟವರಾಗಿರುವ ಹಿನ್ನೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.
ಇಂಥ ಲಸಿಕೆ ಸೆಷನ್ಗಳನ್ನು ಆಯೋಜಿಸುವ ಸಂಬಂಧ ಅಗತ್ಯ ನೆರವು ನೀಡಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕನಿಷ್ಠ 100 ಮಂದಿ ಅರ್ಹ ಮತ್ತು ಇಚ್ಛಿತ ಫಲಾನುಭವಿಗಳಿದ್ದಲ್ಲಿ ಅಂಥ ಸ್ಥಳವನ್ನು ಹಾಲಿ ಇರುವ ಕೋವಿಡ್ ಲಸಿಕೆ ಕೇಂದ್ರಕ್ಕೆ ಜೋಡಿಸಿ ಲಸಿಕೆ ನೀಡಲು ಅವಕಾಶವಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ ಲಸಿಕೆ ಪಡೆಯಲು ಫಲಾನುಭವಿಗಳು ಕೋವಿನ್ ಪೋರ್ಟೆಲ್ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಇಂಥ ಸಂಸ್ಥೆಗಳು ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಜಿಲ್ಲಾ ಆರೋಗ್ಯ ಇಲಾಖೆಯ ಜತೆ ಸಮನ್ವಯಕ್ಕೆ ನಿಯೋಜಿಸಬೇಕು ಎಂದು ಹೇಳಲಾಗಿದೆ.