ಭಾರತದ ಮೇಲೆ ಸೈಬರ್ ದಾಳಿ ನಡೆಸಲು ಚೀನಾ ಸಮರ್ಥ ಎಂದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್
"ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಚೀನಾಗಿಂತ ಬಹಳ ಹಿಂದೆ"

ಹೊಸದಿಲ್ಲಿ: ಭಾರತದ ಹಲವಾರು ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಸೈಬರ್ ದಾಳಿಗಳನ್ನು ನಡೆಸಲು ಚೀನಾ ಸಮರ್ಥವಾಗಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಬುಧವಾರ ವೆಬಿನಾರ್ ಒಂದನ್ನು ಉದ್ದೇಶಿಸಿ ಮಾತನಾಡಿದ ಅವರು ತಂತ್ರಜ್ಞಾನದ ವಿಚಾರದಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ ಎಂದರಲ್ಲದೆ ಭಾರತ ಮತ್ತು ಚೀನಾ ನಡುವೆ ಅತ್ಯಂತ ದೊಡ್ಡ ಅಂತರವಿರುವುದು ಸೈಬರ್ ಕ್ಷೇತ್ರದಲ್ಲಾಗಿದೆ ಎಂದು ಹೇಳಿದರು.
"ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಸಾಕಷ್ಟು ಹಣ ಹೂಡಿಕೆ ಮಾಡಲು ಯಶಸ್ವಿಯಾಗಿದೆ ಆದರೆ ನಾವು ಆರಂಭದಲ್ಲಿ ನಿಧಾನವಾಗಿದ್ದೆವು ಆದುದರಿಂದ ಈ ಕ್ಷೇತ್ರದಲ್ಲಿ ಎರಡೂ ದೇಶಗಳ ಸಾಮರ್ಥ್ಯದ ನಡುವೆ ವ್ಯತ್ಯಾಸವಿದೆ" ಎಂದು ಅವರು ವಿವರಿಸಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಅವರಿಗೆ ಸಮನಾಗಿ ಬೆಳೆಯಲು ನಾವು ಕೂಡ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ ಜನರಲ್ ರಾವತ್, ಚೀನೀ ಬೆದರಿಕೆಗಳನ್ನು ಎದುರಿಸಲು ಸೇನಾ ಪಡೆಗಳಲ್ಲಿ ಸೈಬರ್ ಏಜನ್ಸಿ ಕೂಡ ರಚಿಸಲಾಗಿದೆ ಎಂದರು.
"ಚೀನಾಗೆ ಸಮನಾಗಿ ಬೆಳೆಯಲು ಭಾರತಕ್ಕೆ ಸಂಪೂರ್ಣವಾಗಿ ಸಾಧ್ಯವಾಗದೇ ಇದ್ದರೂ ಈ ನಿಟ್ಟಿನಲ್ಲಿ ಅದು ಪಾಶ್ಚಿಮಾತ್ಯ ದೇಶಗಳಿಂದ ಅಗತ್ಯ ಬೆಂಬಲ ಪಡೆಯುತ್ತಿದೆ. ತಂತ್ರಜ್ಞಾನ ಕ್ಷೇತ್ರದ ಕೊರತೆ ನೀಗಿಲು ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಸಂಪನ್ಮೂಲಗಳನ್ನು ಒಟ್ಟುಗೂಡಿಸಬೇಕಿದೆ" ಎಂದು ಹೇಳಿದ ಅವರು ತಂತ್ರಜ್ಞಾನವನ್ನು ಬಳಸುವಲ್ಲಿ ನೌಕಾಪಡೆಯು ಸೇನಾ ಪಡೆ ಹಾಗೂ ವಾಯುಪಡೆಗಳಿಗಿಂತ ಬಹಳ ಮುಂದಿದೆ ಎಂದು ಹೇಳಲು ತಮಗೆ ಯಾವುದೇ ಹಿಂಜರಿಕೆಯಿಲ್ಲ ಎಂದರು.







