ಪಚ್ಚನಾಡಿ ಡಂಪಿಂಗ್ ಯಾರ್ಡ್ ಅಗ್ನಿ ದುರಂತ; ಗುತ್ತಿಗೆ ಸಂಸ್ಥೆ ನೇರ ಹೊಣೆ: ಸುಧೀರ್ ಶೆಟ್ಟಿ

ಮಂಗಳೂರು, ಎ.8: ನಗರದ ಹೊರವಲಯದ ಪಚ್ಚನಾಡಿ ಡಂಪಿಂಗ್ ಯಾಡ್‌ನ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ರವಿವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತಕ್ಕೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯೇ ನೇರ ಹೊಣೆ ಎಂದು ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಅವರು, ಘಟನೆಯ ಸಂದರ್ಭ ಸ್ಥಳೀಯ ಕಾರ್ಪೊರೇಟರ್, ಮೇಯರ್ ಹಾಗೂ ಶಾಸಕರು ತಕ್ಷಣ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.
ಪರಿಸರ ಸ್ನೇಹಿ ಒಣ ಕಣ ಘಟಕವು ಇಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಿಸುತ್ತಿದ್ದು, ಜನವರಿಗೆ ಅವರ ಗುತ್ತಿಗೆ ಮುಗಿದಿತ್ತು. ಆಯುಕ್ತರು ಕುತ್ತಿಗೆಯನ್ನು ಮೂರು ತಿಂಗಳ ಕಾಲ ವಿಸ್ತರಿಸಿದ್ದರು. ಅಲ್ಲಿ ಆ ಘಟಕದವರು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಬರುವ ಕಸವನ್ನು ಟನ್‌ಗೆ 100 ರೂ.ನಂತೆ ಪಡೆದು ಪ್ಲ್ಯಾಸ್ಟಿಕ್ ಸ್ವಚ್ಛಗೊಳಿಸುವ ಹಾಗೂ ಪ್ರೆಸ್ಸಿಂಗ್ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಮೆ ಮಾಡಿಲ್ಲ ಎಂದು ಮನಪಾ ಸದಸ್ಯರಾದ ವಿನಯ್ ರಾಜ್ ಆರೋಪಿಸಿದ್ದಾರೆ. ವಿಮೆ ಮಾಡಬೇಕಿದ್ದು ಗುತ್ತಿಗೆ ವಹಿಸಿಕೊಂಡ ಸಂಸ್ಥೆಯವರು. ವಕೀಲನಾಗಿದ್ದು ಈ ರೀತಿಯ ಹೇಳಿಕೆಯನ್ನು ವಿನಯ್ ರಾಜ್ ನೀಡಿರುವುದು ಹಾಸ್ಯಾಸ್ಪದ ಎಂದು ಸುಧೀರ್ ಶೆಟ್ಟಿ ಹೇಳಿದರು.
ಮಾಜಿ ಮೇಯರ್ ಕವಿತಾ ಸನಿಲ್ ಅವಧಿಯಲ್ಲಿ ಅಲ್ಲಿ 14ನೆ ಹಣಕಾಸು ಯೋಜನೆಯಡಿ 2 ಲಕ್ಷ ಲೀಟರ್‌ನ ಟ್ಯಾಂಕ್ ನಿರ್ಮಾಣವಾಗಿದೆ. ಆದರೆ ಪಂಪಿಂಗ್ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿಲ್ಲ. ಆ ಹಣವನ್ನು ಅವರು ಅಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ಉಪಯೋಗಿಸಿದ್ದರು. ಹಾಗಾಗಿ ಅಲ್ಲಿ ಬೆಂಕಿ ನಂದಿಸಲು ನೀರಿನ ವ್ಯವಸ್ಥೆ ಇಲ್ಲದಿರುವುದಕ್ಕೆ ಕಾಂಗ್ರೆಸ್ ಹೊಣೆ. ಇದೀಗ ಸ್ಥಳೀಯ ಪ್ರಸಕ್ತ ಸದಸ್ಯರು ಶಾಸಕರ ವಿಶೇಷ ಮುತುವರ್ಜಿಯಲ್ಲಿ ಅಲ್ಲಿ 50 ಎಚ್‌ಪಿ ಪಂಪ್ ಅಳವಡಿಕೆ, ಸಿಸಿ ಕ್ಯಾಮರ, ದಾರಿ ದೀಪ ಅಳವಡಿಸಲು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸುಧೀಶೆಟ್ಟಿ ಹೇಳಿದರು.
ಅಲ್ಲಿದ್ದ ಪಂಪ್ ಒಂದನ್ನು ಸ್ಥಳೀಯ ಕಾರ್ಪೊರೇಟರ್ ಬೇರೆಡೆ ಸಾಗಿಸಿದ್ದಾರೆಂಬ ವಿನಯ್‌ರಾಜ್ ಅವರ ಆರೋಪ ಉಲ್ಲೇಖಿಸಿದ ಸುಧೀರ್ ಶೆಟ್ಟಿ, ಮಂದಾರ ಬೈಲ್‌ನ ಬೋರ್‌ವೆಲ್‌ಗೆ ಅಳವಡಿಸಲಾಗಿದದ 3 ಎಚ್‌ಪಿ ಪಂಪನ್ನು ಆಯುಕ್ತರಿಗೆ ಪತ್ರ ನೀಡಿ ಮನಪಾ ಮೂಲಕವೇ ಅದರ ಬದಿಯ ಪ್ರದೇಶಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂದೀಪ್ ಗರೋಡಿ, ಸದಸ್ಯೆ ಸಂಗೀತ ಆರ್. ನಾಯಕ್, ಬಿಜೆಪಿ ಮುಖಂಡ ರಾಧಾಕೃಷ್ಣ ಉಪಸ್ಥಿತರಿದ್ದರು.
ಪ್ರಸ್ತುತ ಸಂಸ್ಕರಣಾ ಘಟಕದಲ್ಲಿ 100 ಟನ್ ಮಾತ್ರ ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ 250 ಟನ್‌ಗೂ ಅಧಿಕ ತ್ಯಾಜ್ಯ ಸೇರುತ್ತಿದೆ. ಉಳ್ಳಾಲ ಪುರಸಭೆಯ ಸುಮಾರು 75 ಟನ್‌ಗೂ ಅಧಿಕ ತ್ಯಾಜ್ಯ ಅಲ್ಲಿಗೆ ಸೇರುತ್ತಿದೆ. ನಗರಾಭಿವೃದ್ಧಿ ಸಚಿವರಾಗಿ ಅನುಭವ ಇರುವ ಅಲ್ಲಿನ ಶಾಸಕ ಯು.ಟಿ.ಖಾದರ್‌ರವರು ಉಳ್ಳಾಲದಲ್ಲಿಯೇ ಡಂಪಿಂಗ್ ಯಾರ್ಡ್ ಮಾಡಬೇಕು ಎಂದು ಸುಧೀರ್ ಶೆಟ್ಟಿ ಕಣ್ಣೂರು ಒತ್ತಾಯಿಸಿದರು.







