ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗುವವರಿಗೆ ಮಾಸ್ಕ್ ಕಡ್ಡಾಯ: ಕೇಂದ್ರ, ಇಸಿ ಪ್ರತಿಕ್ರಿಯೆ ಕೋರಿದ ದಿಲ್ಲಿ ಹೈಕೋರ್ಟ್

ನವದೆಹಲಿ: ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಅಮಾವೇಶಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಖಾತ್ರಿಪಡಿಸುವ ಮನವಿಯ ಕುರಿತಾದಂತೆ ದಿಲ್ಲಿ ಹೈಕೋರ್ಟ್ ಗುರುವಾರ ಕೇಂದ್ರ ಮತ್ತು ಚುನಾವಣಾ ಆಯೋಗದ ಪ್ರತಿಕ್ರಿಯೆ ಕೋರಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ನ್ಯಾಯಪೀಠವು ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು. ಉತ್ತರ ಪ್ರದೇಶದ ಮಾಜಿ ಡಿಜಿಪಿ ಮತ್ತು ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಅಕೌಂಟೆಬಿಲಿಟಿ ಮತ್ತು ಸಿಸ್ಟಮಿಕ್ ಚೇಂಜ್ ( ಸಿಎಎಸ್ಸಿ) ನ ವಿಕ್ರಮ್ ಸಿಂಗ್ ಈ ಕುರಿತಾದಂತೆ ಅರ್ಜಿ ಸಲ್ಲಿಸಿದ್ದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮತದಾನ ಸಮಿತಿ ಹೊರಡಿಸಿದ ಕಡ್ಡಾಯ ಮಾರ್ಗಸೂಚಿಗಳನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಅಭ್ಯರ್ಥಿಗಳನ್ನು ಪ್ರಚಾರ ಮಾಡದಂತೆ ತಡೆಯಬೇಕು ಎಂಬ ಸಿಂಗ್ ಅವರ ಮುಖ್ಯ ಅರ್ಜಿಯನ್ನು ಏಪ್ರಿಲ್ 30 ರಂದು ನ್ಯಾಯಾಲಯವು ಹೆಚ್ಚಿನ ವಿಚಾರಣೆಗೆ ಒಳಪಡಿಸುವುದಾಗಿ ಹೇಳಿತು.
ಸಿಂಗ್ ಪರವಾಗಿ ಹಾಜರಾದ ವಕೀಲ ವಿರಾಗ್ ಗುಪ್ತಾ ಅವರು, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರದ ಕುರಿತಾದಂತೆ ಮತದಾನ ಮಂಡಳಿಯು ಡಿಜಿಟಲ್, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
"ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ ಬಗ್ಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸರ್ವಾನುಮತದಿಂದ ಒಪ್ಪಿಗೆ ನೀಡಿರುವಾಗ, ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಈ ನಿಯಮವನ್ನು ಏಕೆ ಜಾರಿಗೊಳಿಸಬಾರದು ಎಂಬ ತರ್ಕವನ್ನು ಅದು ನಿರಾಕರಿಸುತ್ತದೆ" ಎಂದು ಗುಪ್ತಾ ವಾದಿಸಿದರು.
ಕೇಂದ್ರ ಸರ್ಕಾರದ ಪರ ವಕೀಲ ಅನುರಾಗ್ ಅಹ್ಲುವಾಲಿಯಾ ಅವರು ನೋಟಿಸ್ ಸ್ವೀಕರಿಸಿದರು.