ಹಿಮಾಚಲ ಪ್ರದೇಶದ ನಗರಪಾಲಿಕೆ ಚುನಾವಣೆ: ಪಾಲಂಪುರ್, ಸೋಲಾನ್ ನಲ್ಲಿ ಕಾಂಗ್ರೆಸ್ ಗೆ ಬಹುಮತ
ಮಂಡಿಯಲ್ಲಿ ಬಿಜೆಪಿಗೆ ಅಧಿಕಾರ
photo: ANI
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಬುಧವಾರ ನಡೆದಿದ್ದ ನಾಲ್ಕು ನಗರಪಾಲಿಕೆ ಚುನಾವಣೆಗಳಲ್ಲಿ ತಲಾ ಎರಡರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿವೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಮಂಡಿ ಹಾಗೂ ಧರ್ಮಶಾಲಾಗಳಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪಕ್ಷ ಪಾಲಂಪುರ ಹಾಗೂ ಸೋಲಾನ್ ನಲ್ಲಿ ಬಹುಮತ ಪಡೆಯುವಲ್ಲಿ ಯಶಸ್ಸು ಕಂಡಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಸಂಜೀವ್ ಚೌಹಾಣ್ ತಿಳಿಸಿದರು.
ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ತವರು ಜಿಲ್ಲೆ ಮಂಡಿಯಲ್ಲಿ ಬಿಜೆಪಿ ಒಟ್ಟು 15 ವಾರ್ಡ್ಗಳಲ್ಲಿ 11ರಲ್ಲಿ ಜಯ ಸಾಧಿಸಿದರೆ, ಕಾಂಗ್ರೆಸ್ ಮಂಡಿಯಲ್ಲಿ ಕೇವಲ 4 ಸೀಟುಗಳನ್ನು ಗೆದ್ದುಕೊಂಡಿದೆ.
ಧರ್ಮಶಾಲಾದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತಕ್ಕೆ ಕೇವಲ ಒಂದು ಸೀಟು ಕೊರತೆಯಾಗಿದೆ. ಒಟ್ಟು 17 ವಾರ್ಡ್ಗಳಲ್ಲಿ 8ರಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ 5ರಲ್ಲಿ, ಪಕ್ಷೇತರರು 4 ಸೀಟುಗಳನ್ನು ಗೆದ್ದುಕೊಂಡಿದ್ದಾರೆ. ಹೆಚ್ಚಿನ ಪಕ್ಷೇತರ ವಿಜೇತರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿದ್ದರು. ಹೀಗಾಗಿ ಧರ್ಮಶಾಲಾದಲ್ಲಿ ಬಹುಮತ ಪಡೆಯಲು ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸಲು ಯತ್ನಿಸಲಿದೆ.
ಈ ಚುನಾವಣೆಯು ಕಾಂಗ್ರೆಸ್ ಗೆ ನೈತಿಕ ಸ್ಥೈರ್ಯ ತುಂಬಿದೆ. ಪಕ್ಷ ಪಾಲಂಪುರ ಹಾಗೂ ಸೋಲನ್ ನಲ್ಲಿ ಸ್ಪಷ್ಟ ಬಹುಮತ ಪಡೆದಿದೆ.
ಪಾಲಂಪುರದಲ್ಲಿ ಕಾಂಗ್ರೆಸ್ 15 ವಾರ್ಡ್ಗಳ ಪೈಕಿ 11ರಲ್ಲಿ ಜಯ ಸಾಧಿಸಿದರೆ, ಬಿಜೆಪಿ ಹಾಗೂ ಪಕ್ಷೇತರರು ತಲಾ 2 ಸೀಟುಗಳನ್ನು ಗೆದ್ದಿದ್ದಾರೆ.
ಸೋಲಾನ್ ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಇಲ್ಲಿ ಕಾಂಗ್ರೆಸ್ 17 ವಾರ್ಡ್ಗಳ ಪೈಕಿ 9ರಲ್ಲಿ ಜಯ ಸಾಧಿಸಿದರೆ, ಬಿಜೆಪಿ 7 ಸೀಟುಗಳನ್ನು ಗೆದ್ದುಕೊಂಡಿದೆ. ಪಕ್ಷೇತರ ಅಭ್ಯರ್ಥಿ ಒಂದು ಸೀಟು ಗೆದ್ದಿದ್ದಾರೆ.