ಗಾಝಿಯಾಬಾದ್ ನ ಅನೇಕ ಆಸ್ಪತ್ರೆಗಳಲ್ಲೂ ಲಸಿಕೆಗಳ ಕೊರತೆ: ನೋ ಸ್ಟಾಕ್ ಬೋರ್ಡ್

ಗಾಝಿಯಾಬಾದ್: ಕೋವಿಡ್-19 ವಿರುದ್ಧ ಲಸಿಕೆಗಳ ಕೊರತೆ ಇಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಲೇ ಇದ್ದರೂ, ದಿಲ್ಲಿ ಸಮೀಪದ ಉತ್ತರಪ್ರದೇಶದ ಗಾಝಿಯಾಬಾದ್ ನ ಖಾಸಗಿ ಆಸ್ಪತ್ರೆಗಳು ಲಸಿಕೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕೆಲವು ಆಸ್ಪತ್ರೆಗಳು ಸೋಮವಾರದಿಂದ ಲಸಿಕೆಗಳನ್ನು ನೀಡುತ್ತಿಲ್ಲ.
ಗಾಝಿಯಾಬಾದ್ ನ ಅನೇಕ ಆಸ್ಪತ್ರೆಗಳು ಮುಂದಿನ ಸ್ಟಾಕ್ ಯಾವಾಗ ಬರುತ್ತದೆ ಎಂಬ ಬಗ್ಗೆ ಸ್ಪಷ್ಟತೆಯನ್ನು ಹೊಂದಿಲ್ಲ. ಲಸಿಕೆ ಮುಗಿದಿದೆ ಎಂದು ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ನೋಟಿಸ್ ಗಳನ್ನು ಹಾಕಲಾಗಿದೆ.ಜನರು ಲಸಿಕೆ ಸ್ವೀಕರಿಸಲು ಬರುವಮೊದಲು ಕರೆ ಮಾಡಲು ಕೇಳಿಕೊಳ್ಳಲಾಗಿದೆ.
ಕೋವಿಡ್‍ನಿಂದ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರ ರಾಜ್ಯದ ಹಲವು ಭಾಗಗಳಲ್ಲಿ ಲಸಿಕೆಗಳ ಕೊರತೆ ಎದುರಿಸುತ್ತಿರುವ ವರದಿ ಬರುತ್ತಿದೆ. ಕೆಲವು ಕಡೆಗಳನ್ನು ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದೆ.
ನಾವು ಸೋಮವಾರದಿಂದ ಲಸಿಕೆ ದಾಸ್ತಾನು ಹೊಂದಿಲ್ಲ.
ಸಾಮಾನ್ಯವಾಗಿ 200ರ ಬದಲು ನಾವು ಸೋಮವಾರ 50 ಜನರಿಗೆ ಮಾತ್ರ ಲಸಿಕೆ ನೀಡಿದ್ದೆವು. ಈಗ ಲಸಿಕೆ ನೀಡಿಕೆ ನಿಲ್ಲಿಸಿದ್ದೇವೆ. ಮುಂದಿನ ಸ್ಟಾಕ್ ಯಾವಾಗ ಬರುತ್ತದೆ ಎಂದು ಯಾವುದೇ ಸ್ಪಷ್ಟತೆ ಇಲ್ಲ ಎಂದು ಲಿಫ್ ಆಸ್ಪತ್ರೆಯ ನಿರ್ದೇಶಕ ಡಾ.ಅಲೋಕ್ ಗುಪ್ತಾ ತಿಳಿಸಿದ್ದಾರೆ.
ನಾನು ಕಳೆದ 3-4 ದಿನಗಳಿಂದ ಲಸಿಕೆ ಪಡೆಯಲು ಲಸಿಕೆ ಕೇಂದ್ರಗಳತ್ತ ಓಡಾಡುತ್ತಿರುವೆ. ಎಲ್ಲಿಯೂ ಲಸಿಕೆಗಳಿಲ್ಲ. ನಮ್ಮ ಆರೋಗ್ಯವನ್ನು ಹಾಗೂ ಸುತ್ತಮುತ್ತಲಿನವರನ್ನೂ ರಕ್ಷಿಸಲು ನಾವು ಬಯಸುತ್ತೇವೆ. ಆದರೆ ಯಾವುದೆ ಲಸಿಕೆ ಲಭ್ಯವಿಲ್ಲ ಎಂದು ಉದ್ಯಮಿ ದೀಪಕ್ ಗುಪ್ತಾ ಹೇಳಿದ್ದಾರೆ.