ಧ್ವಜ ಹಾರಿಸುವುದು ಅಪರಾಧವಲ್ಲ, ಫೇಸ್ ಬುಕ್ ಲೈವ್ ಮಾಡಿ ತಪ್ಪು ಮಾಡಿದೆ: ನ್ಯಾಯಾಲಯಕ್ಕೆ ಹೇಳಿದ ದೀಪ್ ಸಿಧು

ಹೊಸದಿಲ್ಲಿ: ಧ್ವಜ ಹಾರಿಸುವುದು ಅಪರಾಧವಲ್ಲ ಹಾಗೂ ತಾನು ಕೆಂಪುಕೋಟೆಯಲ್ಲಿ ಫೇಸ್ ಬುಕ್ ಲೈವ್ ಮಾಡಿ ತಪ್ಪೆಸಗಿದ್ದಾಗಿ ಜನವರಿ 26ರಂದು ರೈತರ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭ ಕೆಂಪುಕೋಟೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಂಜಾಬಿ ನಟ ದೀಪ್ ಸಿಧು ತಮ್ಮ ವಕೀಲರ ಮೂಲಕ ದಿಲ್ಲಿಯ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಗುರುವಾರ ಸಿಧು ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದ ಸಂದರ್ಭ ಅವರ ವಕೀಲರು ಮೇಲಿನಂತೆ ತಿಳಿಸಿದ್ದು ಜಾಮೀನು ಅರ್ಜಿಯ ವಿಚಾರಣೆಯನ್ನು ಎಪ್ರಿಲ್ 12ಕ್ಕೆ ಮುಂದೂಡಲಾಗಿದೆ.
ಸಿಧು ಅವರು ಪ್ರಮುಖವಾಗಿ ಹಿಂಸೆಯಲ್ಲಿ ತೊಡಗಿದ್ದರು ಹಾಗೂ ಹಿಂಸೆ ಪ್ರೇರೇಪಿಸಿದ್ದರು ಮತ್ತು ಕತ್ತಿ, ಕೋಲು ಮತ್ತು ಧ್ವಜಗಳೊಂದಿಗಿರುವುದು ವೀಡಿಯೋದಲ್ಲಿ ಕಾಣಿಸಿತ್ತು ಎಂದು ದಿಲ್ಲಿ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಿಧು ಅವರು ಜನರನ್ನು ತಮ್ಮ ಭಾಷಣದ ಮೂಲಕ ಪ್ರಚೋದಿಸಿದ್ದಾರೆ ಎಂದೂ ಪೊಲೀಸರು ಆರೋಪಿಸಿದ್ಧಾರೆ.
"ನಾನು ಧ್ವಜವನ್ನು ಹಾರಿಸಿಲ್ಲ ಹಾಗೂ ಯಾರಿಗೂ ಧ್ವಜ ಹಾರಿಸುವಂತೆ ಹೇಳಿಲ್ಲ. ಅಷ್ಟಕ್ಕೂ ಧ್ವಜ ಹಾರಿಸುವುದು ಅಪರಾಧವಲ್ಲ, ನಾನು ತಪ್ಪು ಮಾಡಿದ್ದೇನೆ ಆದರೆ ತಪ್ಪು ಅಪರಾಧವಾಗುವುದಿಲ್ಲ, ನಾನು ಫೇಸ್ ಬುಕ್ ಲೈವ್ ಮಾಡಿ ತಪ್ಪು ಮಾಡಿದ್ದೇನೆ. ನಾನು ಫೇಸ್ ಬುಕ್ ಲೈವ್ ಮಾಡಿದ್ದಕ್ಕಾಗಿ ನನ್ನನ್ನು ದೇಶದ್ರೋಹಿ ಎಂದು ಹೇಳಲಾಯಿತು" ಎಂದು ಸಿಧು ಅವರ ಪರ ಅವರ ವಕೀಲ ಅಭಿಷೇಕ್ ಗುಪ್ತಾ ಹೇಳಿದ್ದಾರೆ.
ಸಿಧು ಅವರು ಯಾವುದೇ ಹಿಂಸೆಯಲ್ಲಿ ತೊಡಗಿಲ್ಲ, ಹಿಂಸೆ ಆರಂಭಗೊಳ್ಳುವುದಕ್ಕಿಂತ ಮುನ್ನವೇ ಅಲ್ಲಿಂದ ತೆರಳಿದ್ದಾರೆ. ತನಿಖಾ ಏಜನ್ಸಿಗಳು ಜತೆ ತಾವು ಶೇರ್ ಮಾಡಿರುವ ಎರಡು ವೀಡಿಯೋಗಳಲ್ಲಿ ತಾವು ಗುಂಪನ್ನು ಸಮಾಧಾನಿಸುತ್ತಿರುವುದು ಕಾಣಿಸುತ್ತದೆ. ಎಂದೂ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಸಿಧು ವಕೀಲ ತಿಳಿಸಿದ್ದಾರೆ.