ದೇವಸ್ಥಾನ ಸಮೀಪದ ಪೆಂಡಾಲ್ ಗೆ ಪ್ರವೇಶಿಸಿದ್ದಕ್ಕೆ ಯುವಕನನ್ನು ಥಳಿಸಿ ಕೊಲೆಗೈದ ದುಷ್ಕರ್ಮಿಗಳು

ರುದ್ರಪುರ (ಉತ್ತರಾಖಂಡ): ಧಾರ್ಮಿಕ ಸಮಾರಂಭವೊಂದು ನಡೆಯುತ್ತಿದ್ದ ವೇಳೆ ಅಲ್ಲಿನ ಪೆಂಡಲ್ ಗೆ ಪ್ರವೇಶಿಸಿದನೆಂದು ಆರೋಪಿಸಿ 29ರ ಹರೆಯದ ಯುವಕನೋರ್ವನನ್ನು ಥಳಿಸಿ ಕೊಂದಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದ ದುರ್ಗಾ ಮಂದಿರದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ ಎಂದು theweek.in ವರದಿ ಮಾಡಿದೆ.
ಕೊಲೆಗೈಯಲ್ಪಟ್ಟ ಯುವಕ ಜಾನಿ ಸಿಂಗ್ ಪೆಂಡಲ್ ಹೊರಗಿನ ರಸ್ತೆಯಲ್ಲಿ ಹೊರಳಾಡುತ್ತಾ, ಸುಮಾರು ಮೂರು ಗಂಟೆಗಳ ಕಾಲ ಅರೆಪ್ರಜ್ಞಾವಸ್ಥೆಯಲ್ಲಿ ನೋವಿನಿಂದ ಬಳಲುತ್ತಿದ್ದರೂ ಯಾರೂ ಆತನ ರಕ್ಷಣೆಗೆ ಮುಂದಾಗಿರಲಿಲ್ಲ ಎಂದು ಅಲ್ಲಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್ ಕುನ್ವರ್ ಹೇಳಿಕೆ ನೀಡಿದ್ದಾರೆ.
ಗಂಟೆಗಳ ಬಳಿಕ ಕೆಲವು ದಾರಿಹೋಕರರು ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ವ್ಯಕ್ತಿಯು ಮದ್ಯಪಾನ ಮಾಡಿದ್ದು, ಪೆಂಡಾಲ್ ನಲ್ಲಿದ್ದವರೊಂದಿಗೆ ವಾಗ್ವಾದ ನಡೆಸಿದ್ದನು. ಬಳಿಕ, ವಾಗ್ವಾದ ತಾರಕಕ್ಕೇರಿದ ಕಾರಣ ಆತನನ್ನು ಜನರು ಥಳಿಸಿ ಹೊರಗೆಸೆದಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಈ ಕುರಿತಾದಂತೆ ಪ್ರಕರಣ ದಾಖಲಿಸಲಾಗಿದ್ದು, ಸಿಸಿಟಿವಿ ಆಧಾರದ ಮೇಲೆ ವ್ಯಕ್ತಿಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾಗಿ ವರದಿಯಾಗಿದೆ.