ಮಣಿಪಾಲ: ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ

ಮಣಿಪಾಲ : ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಕಳೆದ ಕೆಲ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕತೆಗಾರ ಬೋಳುವಾರು ಮಹಮ್ಮದ್ ಕುಂಞ ಬರೆದ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಹಾಗೂ ಡಾ. ಮಹಾಬಲೇಶ್ವರ ರಾವ್ ಬರೆದ ‘ಬರಿಯ ಬಟ್ಟೆಯಲ್ಲ ಭಾರತದ ಬಾವುಟ’ ಕೃತಿಗಳ ಬಗ್ಗೆ ನಡೆಸಿದ ಸ್ಪರ್ಧೆಯಲ್ಲಿ ವಿಶೇಷ ನಿರ್ವಹಣೆಯನ್ನು ತೋರಿದ 20 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಇವರು ಕೊಡ ಮಾಡಿದ ಗಾಂಧಿ ಬಗ್ಗೆ ಪುಸ್ತಕಗಳನ್ನು ಹಾಗೂ ಪ್ರಮಾಣ ಪತ್ರವನ್ನು ಸ್ವರ್ಧೆಯಲ್ಲಿ ಭಾಗವಹಿಸಿದ ಶಾಲೆಗಳಿಗೆ ತೆರಳಿ ನೀಡಲಾಯಿತು.
ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಇಲ್ಲಿ ನಡೆದ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಣೆಯ ಸಂದರ್ಭದಲ್ಲಿ ಡಯಟಿನ ಉಪ ಪ್ರಾಂಶುಪಾಲ ಡಾ.ಆಶೋಕ ಕಾಮತ್, ಪ್ರಾಧ್ಯಾಪಕರಾದ ಯೋಗ ನರಸಿಂಹ ಸ್ವಾಮಿ, ಹಾಗೂ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವಿನೀತ್ ರಾವ್ ಉಪಸ್ಥಿತರಿದ್ದರು.
ವಿನೀತ್ ರಾವ್ ಇವರು ಗಾಂಧಿ ತತ್ವಗಳ ಬಗ್ಗೆ ಹಾಗೂ ಬಾವುಟದ ಬಗ್ಗೆ ವಿದ್ಯಾರ್ಥಿಗಳಿಗೆ ಕಿರು ಪರಿಚಯವನ್ನು ನೀಡಿದರು. ಸಂಸ್ಥೆಯ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ಸಂಘಟಿಸಿದರು.
ಈ ಕಾರ್ಯಕ್ರಮವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಮೇಶ ಪೈ ಮಾನವ ಸಂಪತ್ ಅಭಿವೃದ್ಧಿ ಕೇಂದ್ರ ಮಣಿಪಾಲ ಹಾಗೂ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.







