ಮಕ್ಕಳನ್ನು ಲೈಂಗಿಕ, ಮಾದಕದ್ರವ್ಯ ದೌರ್ಜನ್ಯದಿಂದ ರಕ್ಷಿಸಲು ಆದ್ಯತೆ: ಡಾ.ಆನಂದ್

ಉಡುಪಿ, ಎ.8: ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳನ್ನು ಲೈಂಗಿಕ ಹಾಗೂ ಮಾದಕ ದ್ರವ್ಯ ದೌರ್ಜನ್ಯದಿಂದ ರಕ್ಷಿಸಲು ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದು, ‘ಮಕ್ಕಳ ಸ್ನೇಹಿ ಜಿಲ್ಲೆ’ ಎನಿಸಿಕೊಂಡಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಆರ್.ಜಿ.ಆನಂದ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣೆಯ ಪರಿಶೀಲನೆಗೆ ಆಗಮಿಸಿದ ಅವರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ ಇಲಾಖೆ ಗಳ ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಮಕ್ಕಳ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಉಡುಪಿ ಜಿಲ್ಲೆ ಮಾದರಿಯಂತಿದೆ. ಇಲ್ಲಿ 28 ಮಕ್ಕಳ ರಕ್ಷಣಾ ಕೇಂದ್ರಗಳಿದ್ದು, ಇಲ್ಲಿ ಸುಮಾರು 400ಕ್ಕೂ ಅಧಿಕ ಮಕ್ಕಳು ಸುರಕ್ಷಿತವಾಗಿದ್ದಾರೆ. ಕೇಂದ್ರಗಳಿಂದ ಮಕ್ಕಳು ತಪ್ಪಿಸಿಕೊಳ್ಳುವ ಪ್ರಕರಣಗಳೇ ಇಲ್ಲಿ ವರದಿಯಾಗದಿರುವುದು ಇವುಗಳ ಉಪ ಯುಕ್ತತೆಯನ್ನು ಹೇಳುತ್ತವೆ ಎಂದರು.
ಬಾಲ್ಯವಿವಾಹ ತಡೆಯುವಲ್ಲಿಯೂ ಉಡುಪಿ ಜಿಲ್ಲೆ ಅತ್ಯುತ್ತಮ ಸಾಧನೆ ತೋರುತ್ತಿದೆ. 2021ರಲ್ಲಿ ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹ ಪ್ರಕರಣ ವರದಿಯಾಗಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಮಕ್ಕಳ ಹಕ್ಕುಗಲ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದಾರೆ ಎಂದವರು ಶ್ಲಾಘಿಸಿದರು.
ಸಹಾಯವಾಣಿ ‘ಸಂವೇದನಾ’: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಸಮಸ್ಯೆಗಳನ್ನು ಅರಿತು, ಅವರ ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕೌನ್ಸಿಲಿಂಗ್ ನಡೆಸಲು ಮಕ್ಕಳ ಉಚಿತ ಸಹಾಯವಾಣಿ ‘ಸಂವೇದನಾ’ವನ್ನು ಆರಂಭಿಸಿದ್ದು, ಇದು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಟೋಲ್‌ಫ್ರಿ ನಂ.:18001212830 ಇದ್ದು, ಇದಕ್ಕೆ ಸಹಾಯ ಯಾಚಿಸಿ ಕರೆ ಮಾಡುವ ಯಾವುದೇ ಮಕ್ಕಳಿಗೆ ಅಲ್ಲಿರುವ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಲಿದ್ದಾರೆ ಎಂದರು.
ಇಂದು ಕನ್ನಡ ಸಹಿತ ಹೆಚ್ಚಿನೆಲ್ಲಾ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಾಚರಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳು ಎದುರಿಸುವ ಆತಂಕಕ್ಕೂ ಇಲ್ಲಿ ಸೂಕ್ತ ಮಾರ್ಗದರ್ಶನ, ಪರಿಹಾರ ಸಿಗಲಿದೆ. ಇಲ್ಲಿ ದಾಖಲಾಗುವ ದೂರುಗಳನ್ನು 24 ಗಂಟೆಯೊಳಗೆ ಇತ್ಯರ್ಥ ಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ಈಗಾಗಲೇ ಉಚಿತ ಸಹಾಯವಾಣಿಗೆ ಸಾವಿರಾರು ಕರೆಗಳು ಬರುತ್ತಿವೆ ಎಂದು ಡಾ.ಆನಂದ್ ತಿಳಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ, ಆರೋಗ್ಯ ಸ್ಥಿತಿಗತಿ, ಸೈಕಾಲಜಿ, ಬಾಲ್ಯ ವಿವಾಹ, ಬಾಲಾಪರಾಧಿ ಕಾಯ್ದೆ, ಅನಾಥ ಮಕ್ಕಳ ರಕ್ಷಣೆ ಸಹಿತ 6 ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲು ದೇಶಾದ್ಯಂತ 200 ಜಿಲ್ಲೆಗಳಿಗೆ ತಾನು ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ಡಾ.ಆನಂದ್ ತಿಳಿಸಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್‌ಪಿ ಕುಮಾರಚಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ, ಮಕ್ಕಳ ರಕ್ಷಣಾ ಘಟಕ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.







