ಅಮಾತ್ತಿನಲ್ಲಿಡಲಾದ ಖಾಸಗಿ ಬಸ್‌ಗಳನ್ನೂ ಓಡಿಸಲು ಅವಕಾಶ: ಉಡುಪಿ ಆರ್‌ಟಿಓ

ಉಡುಪಿ, ಎ.8: ಸರಕಾರಿ ಬಸ್ ಮುಷ್ಕರದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೇವೆ ನೀಡುವ ಖಾಸಗಿ ಬಸ್‌ಗಳನ್ನು ತಡೆಯಬಾರದು ಎಂದು ಸರಕಾರ ಈಗಾಗಲೇ ಆದೇಶ ನೀಡಿದೆ. ಅವರಿಗೆ ಸರಕಾರದಿಂದ ಎ.7ರಿಂದ ಎ.30ರ ವರೆಗೆ ತೆರಿಗೆ ವಿನಾಯಿತಿ ಕೂಡ ನೀಡಲಾಗುತ್ತದೆ. ಅಮಾನತ್ತಿನಲ್ಲಿ ಇಡಲಾದ ಬಸ್‌ಗಳನ್ನು ಕೂಡ ಓಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೋಗಿ ಪುಟ್ಟಪ್ಪ ಗಂಗಾಧರ ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಖಾಸಗಿ ಬಸ್ಸಿನವರು ಐದು ಜನ ಪ್ರಯಾಣಿಕರಿದ್ದರೂ ಕರೆದುಕೊಂಡು ಹೋಗಲು ಸಿದ್ಧರಿದ್ದಾರೆ. ಆ ರೀತಿಯ ಉತ್ತಮ ಸೇವೆಯನ್ನು ಖಾಸಗಿ ಯವರು ನೀಡುತ್ತಿದ್ದಾರೆ. ಎಲ್ಲ ಮಾರ್ಗದಲ್ಲೂ ಬಸ್ ಓಡಿಸಲಾಗುತ್ತದೆ. ಹುಬ್ಬಳ್ಳಿ, ಧಾವರಾಡ, ಬೆಳಗಾಂಗೆ ಬೆಳಗಿನ ಜಾ ಬಸ್‌ಗಳು ಸಂಚಾರ ಮಾಡುತ್ತದೆ. ಹಾಸನಕ್ಕೂ ಖಾಸಗಿ ಬಸ್ ಓಡಿಸಲಾಗುವುದು. ಪ್ರತಿಯೊಬ್ಬರು ಪ್ರಯಾಣಿಕರು, ಚಾಲಕರು, ನಿರ್ವಾಹಕು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಬಗ್ಗೆ ಎಂಬ ಮಾಧ್ಯಮದ ವರದಿ ನೋಡಿ, ಪರಿಶೀಲಿಸಿದಾಗ ಖಾಸಗಿಯವರು ಎಲ್ಲೂ ಹೆಚ್ಚುವರಿ ದರ ವಸೂಲಿ ಮಾಡಿರುವುದು ಕಂಡುಬಂದಿಲ್ಲ. ಈ ಮುಷ್ಕರದ ಹೆಸರಿನಲ್ಲಿ ಹೆಚ್ಚುವರಿ ದರ ವಸೂಲಿ ಮಾಡದಂತೆ ಅಟೋ ರಿಕ್ಷಾ ಚಾಲಕರಿಗೂ ನಾವು ತಿಳಿ ಹೇಳಿದ್ದೇವೆ ಎಂದು ಅವರು ಹೇಳಿದರು.
ಜನರ ಹಿತಕ್ಕಾಗಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಮಾಲಕರ ಸಂಸ್ಥೆಗಳಿವೆ. ಎಲ್ಲ ಮಾರ್ಗದಲ್ಲೂ ಕನಿಷ್ಠ ಎರಡು ಗಂಟೆಗಳಿಗೊಮ್ಮೆ ಬಸ್ ಓಡಿಸುವ ಬಗ್ಗೆ ಬಸ್ ಮಾಲಕರ ಸಂಘದವರು ಸಹಕಾರ ನೀಡುತ್ತಿದ್ದಾರೆ. ಸದ್ಯ ನಾವು ಎಲ್ಲ ಮಾರ್ಗಗಳಲ್ಲಿಯೂ ಖಾಸಗಿ ಬಸ್‌ಗಳನ್ನು ಓಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿ ಸಾರಿಗೆ ಇಲಾಖೆಯ ನಿರೀಕ್ಷಕ ಮಾರುತಿ ನಾಯಕ್ ಹಾಗೂ ಖಾಸಗಿ ಬಸ್ ಮಾಲಕರು ಹಾಜರಿದ್ದರು.







