ಯಡಿಯೂರಪ್ಪ-ಈಶ್ವರಪ್ಪ ನಡುವಿನ ಗೊಂದಲ ಶಮನ: ಅರುಣ್ ಸಿಂಗ್

ಮಂಗಳೂರು, ಎ.8: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯ, ಗೊಂದಲ ಶಮನಗೊಂಡಿದ್ದು, ರಾಜ್ಯದ ಆಡಳಿತ ಸುಭದ್ರವಾಗಿ ಮುಂದುವರಿಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಗುರುವಾರ ಮಂಗಳೂರಿಗೆ ಆಗಮಿಸಿದ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿರಿಯ ಸಚಿವ ಈಶ್ವರಪ್ಪರೊಂದಿಗೆ ಮಾತುಕತೆ ನಡೆಸಿದ್ದೇನೆ. ಗೊಂದಲ ಬಗೆಹರಿದಿದ್ದು, ಇಬ್ಬರು ನಾಯಕರೂ ಒಂದಾಗಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿರುವೆ. ಕಾರ್ಯಕ್ರಮ ಮುಗಿಸಿದ ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವ ಕಲ್ಯಾಣ್ ಮತ್ತು ಮಾಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಈ ಭಾಗದಲ್ಲಿ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸುತ್ತಿದ್ದು, ಬಿಜೆಪಿ ಗೆಲುವು ನಿಶ್ಚಿತ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹಿರಿಯ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಅರುಣ್ ಸಿಂಗ್ ನಿರಾಕರಿಸಿದರು.







