ಬಾಲಕನ ಕೊಲೆ ಪ್ರಕರಣ: ಸಮಗ್ರ ತನಿಖೆಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮನವಿ

ಮಂಗಳೂರು, ಎ.8: ತಲಪಾಡಿ ಸಮೀಪದ ಕೆ.ಸಿ.ರೋಡ್ ಬಳಿ ಮೊನ್ನೆ ನಡೆದ ಆಕಿಫ್ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ಗಾಂಜಾ ಪ್ರಕರಣಗಳ ಅಪರಾಧಿಗಳನ್ನು ಮಟ್ಟಹಾಕುವಂತೆ ಹಾಗೂ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ, ನೈತಿಕ ಪೊಲೀಸ್‌ಗಿರಿಯ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳೂರು ಪೊಲೀಸ್ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಆಕಿಫ್ ಕೊಲೆ ಪ್ರಕರಣವು ಮೇಲ್ನೋಟಕ್ಕೆ ಪಬ್‌ಜಿ ಗೇಮ್ಗೆ ಸಂಬಂಧಿಸಿದ ಸೇಡಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದರೂ ಇದೊಂದು ಪೂರ್ವಯೋಜಿತ ಕೊಲೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಪರಿಸರದಲ್ಲಿ ರಾತ್ರಿ 12ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆಯ ಅವಧಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳ ತಪಾಸಣೆ ಮಾಡುವಂತೆ, ರಾತ್ರಿ ಗಸ್ತುಪಡೆ ಹೆಚ್ಚುಗೊಳಿಸುವಂತೆ ಸಮಿತಿ ಮನವಿ ಮಾಡಿದೆ.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಕೋಶಾಧಿಕಾರಿ ಪುರುಷೋತ್ತಮ್ ಅಂಚನ್, ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಬಾತಿಶ್ ಅಜ್ಜಿನಡ್ಕ, ಮಂಗಳೂರು ವಿಧಾನ ಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಫಿರೋಝ್ ಮಲಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರ ಇಂಟಕ್ ಅಧ್ಯಕ್ಷ ಹರೀಶ್ ರಾವ್, ಕೋಟೆಕಾರ್ ಗ್ರಾಮ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮೊಯಿದಿನ್ ಬಾವ, ಪುಷ್ಠಿ ಮುಹಮ್ಮದ್, ಕೋಟೆಕಾರ್ ಗ್ರಾಮ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಮಾಲ್ ಅಜ್ಜಿನಡ್ಕ, ಪಾವೂರು ಗ್ರಾಮ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಡಿ. ಉಪಸ್ಥಿತರಿದ್ದರು.







