ಕೋವಿಡ್19: ಮೈಸೂರಿನಲ್ಲಿ ಜಿಲ್ಲಾಧಿಕಾರಿ ಹೇರಿದ್ದ ಕೆಲ ನಿಯಮಗಳನ್ನು ರದ್ದುಗೊಳಿಸಿದ ಸರಕಾರ

ರೋಹಿಣಿ ಸಿಂಧೂರಿ
ಮೈಸೂರು,ಎ.8: ಕೋವಿಡ್ ಸಂಬಂಧ ಕೆಲವು ನಿಯಮಗಳನ್ನು ಹೇರಿ ಹತ್ತು ದಿನಗಳವರೆಗೆ ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಈ ತಿಂಗಳ ಎ.10 ರಿಂದ 20 ರವರೆಗೆ ಬೆಂಗಳೂರಿನಿಂದ ಮೈಸೂರಿಗೆ ಬರುವ ಪ್ರವಾಸಿಗರು, ಚಿತ್ರಮಂದಿರಕ್ಕೆ ಹೋಗುವವರು, ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಕೋವಿಡ್ ಪರೀಕ್ಷೆ ನೆಗೆಟಿವ್ ಹೊಂದಿರಬೇಕು, ಕೊರೋನ ನಿಯಂತ್ರಣ ಸಂಬಂಧ ಹೋಂ ಗಾರ್ಡ್ಗಳ ಮೂಲಕ ಪ್ರತಿ ಹಂತದಲ್ಲೂ ತಪಾಸಣೆ ಮಾಡಲಾಗುವುದು ಎಂಬ ಆದೇಶವನ್ನು ಗುರುವಾರ ಬೆಳಗ್ಗೆ ಹೊರಡಿಸಿದ್ದರು.
ಕೋರೋನ ಸಂಬಂಧಿಸಿದಂತೆ ಅಥವಾ ಇನ್ನಾವುದೇ ತೀರ್ಮಾನ ಮಾಡುವುದು ರಾಜ್ಯದ ಮುಖ್ಯ ಕಾರ್ಯದರ್ಶಿ ಹೊರತುಪಡಿಸಿ ಯಾರೂ ಆದೇಶ ಮಾಡಬಾರದು ಎಂದು ಮುಖ್ಯಮಂತ್ರಿಗಳು ಮಾ.29 ರಂದು ಆದೇಶ ಹೊರಡಿಸಿದ್ದು, ಯಾವುದೇ ಸಲಹೆ ಸೂಚನೆ ಕ್ರಮ ಜರುಗಿಸುವ ಅಗತ್ಯವಿದ್ದಲ್ಲಿ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದು ಆದೇಶ ಹೊರಡಿಸಿದ್ದರು.
ಹಾಗಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶವನ್ನು ರದ್ದುಗೊಳಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದ ಸುತ್ತೋಲೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹಿನ್ನಡೆಯಾದಂತಾಗಿದೆ.







