ಹಾಲು ಉತ್ಪಾದಕರ ಸಂಘದ ನಿರ್ದೇಶಕ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ: ಕಾರ್ಯದರ್ಶಿ ದೂರು

ಬೆಳ್ತಂಗಡಿ: ಸಂಘದ ನಿರ್ದೇಶಕ ಆನಂದ ಗೌಡ ಬರಮೇಲು ಎಂಬುವರು ಕರ್ತವ್ಯಕ್ಕೆ ಅಡ್ಡಿಪಡಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ, ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರೂ ಅವರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಕಡಿರುದ್ಯಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಅಶ್ವಿನಿ ಎಂ. ತಿಳಿಸಿದರು.
ಅವರು ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮಗಾದ ನೋವು, ಅವಮಾನಗಳನ್ನು ವಿವರಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎ.2 ರಂದು ವಿಮಲ ಎಂಬುವರು ಸಂಘಕ್ಕೆ ಹಾಲು ತಂದ ವೇಳೆ ಹಾಲಿನ ಗುಣಮಟ್ಟ ಇಲ್ಲದ್ದರಿಂದ ಕೆ.ಎಂ.ಎಫ್. ನಿಯಮಾನುಸಾರ ಅದನ್ನು ಸ್ವೀಕರಿಸಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಆನಂದ ಗೌಡ ಅವರು ಸಂಘದ ಅಧ್ಯಕ್ಷರಿಗೆ ಹಾಗೂ ತನಗೆ ದೂರವಾಣಿಯಲ್ಲಿ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ನಾನು ಬೆಳ್ತಂಗಡಿ ಠಾಣೆಗೆ ಆನಂದ ಗೌಡ ಅವರ ಬೈಗುಳದ ಆಡಿಯೋ ಸಾಕ್ಷ್ಯ ಸಹಿತ ದೂರು ನೀಡಿದ್ದರೂ ಅವರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರಲ್ಲದೆ ರಾಜಿ ಪಂಚಾಯತಿಕೆಯ ಪ್ರಸ್ತಾಪವಿಡುತ್ತಿದ್ದಾರೆ. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಇನ್ನುಳಿದ ಎಲ್ಲಾ ನಿರ್ದೇಶಕರು, ಸದಸ್ಯರು ಕರ್ತವ್ಯದಲ್ಲಿ ಯಾವುದೇ ಲೋಪವಿಲ್ಲದ್ದರಿಂದ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಬೆಂಗಳೂರಿನ ಮಹಿಳಾ ಆಯೋಗಕ್ಕೆ, ಪುತ್ತೂರು ಎ.ಸಿ.ಗೆ, ಸಿ.ಡಿ.ಪಿ.ಓ.ಗೆ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಆಡಿಯೋ ಸಹಿತ ದೂರು ನೀಡಿದ್ದೇನೆ ಎಂದರು.
ಬೆಳ್ತಂಗಡಿ ಠಾಣೆಯಲ್ಲಿ ನ್ಯಾಯ ದೊರಕದೇ ಇರುವುದರಿಂದ ಇದೀಗ ನಾನು ಎಸ್ .ಪಿ.ಅವರಲ್ಲಿ ರಕ್ಷಣೆಗಾಗಿ ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ನ್ಯಾಯ ಕೇಳಲು ತೀರ್ಮಾನಿಸಿದ್ದೇನೆ ಎಂದರು. ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪ್ರವೀಣ್, ಉಪಾಧ್ಯಕ್ಷ ರಾಮಣ್ಣ ಸುವರ್ಣ, ನಿರ್ದೇಶಕಿಯರಾದ ಲಲಿತಾ ಹಾಗೂ ಪದ್ಮಿನಿ ಇದ್ದರು.







