ಮಾತು ಕೊಟ್ಟಂತೆ ಮೀಸಲಾತಿ ಕಲ್ಪಿಸದಿದ್ದರೆ ಆಗಸ್ಟ್ 15ರಿಂದ ಹೋರಾಟ: ಜಯಮೃತ್ಯುಂಜಯ ಸ್ವಾಮಿ
ಬೆಂಗಳೂರು, ಎ. 8: ರಾಜ್ಯದಲ್ಲಿನ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆ ಅಧಿವೇಶನದಲ್ಲಿ ಭರವಸೆ ನೀಡಿದಂತೆ ನಡೆದುಕೊಳ್ಳಬೇಕು. ಒಂದು ವೇಳೆ ಮಾತು ತಪ್ಪಿದರೆ ಆಗಸ್ಟ್ 15ರಿಂದ ಹೋರಾಟ ಸಜ್ಜಾಗಬೇಕಾಗುತ್ತದೆ ಎಂದು ಕೂಡಲಸಂಗಮದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮಿ ಎಚ್ಚರಿಸಿದ್ದಾರೆ.
ಗುರುವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಏರ್ಪಡಿಸಿದ್ದ ಶರಣು ಶರಣಾರ್ಥಿ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರ ಭರವಸೆಯ ಜೊತೆಗೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟವನ್ನು ಹಿಂದಕ್ಕೆ ಪಡೆಯಲಾಗಿತ್ತು. ಸರಕಾರ ನೀಡಿದ ಭರವಸೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಸಂದರ್ಭದಲ್ಲಿ ಕಿತ್ತೂರು ಚೆನ್ನಮ್ಮನ ವಂಶಸ್ಥರು ಹೋರಾಡಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಸ್ಮರಿಸಿದ ಶ್ರೀಗಳು, ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಯುವಕರಿಗೆ ಉದ್ಯೋಗ ಸಲುವಾಗಿ ಮೀಸಲಾತಿ ಅವಶ್ಯಕವಾಗಿದ್ದು, ನವಸಮಾಜ ಕಟ್ಟುವ ಕೆಲಸ ಆಗಬೇಕಾಗಿದೆ. ಹೀಗಾಗಿ ಮೀಸಲಾತಿ ಅಗತ್ಯ ಎಂದು ಹೇಳಿದರು.





