ಉ.ಪ್ರ.ಪಂಚಾಯತ್ ಚುನಾವಣೆ: ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ ಕುಲ್ ದೀಪ್ ಸಿಂಗ್ ಪತ್ನಿಗೆ ಬಿಜೆಪಿ ಟಿಕೆಟ್

ಲಕ್ನೊ: ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ನ ಪತ್ನಿ ಸಂಗೀತಾಗೆ ಉತ್ತರಪ್ರದೇಶದಲ್ಲಿ ನಡೆಯಲಿರುವ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಉನ್ನಾವೊದ ನಿರ್ಗಮನ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿರುವ ಸಂಗೀತಾ, ಫತೇಪುರ್ ಚೌರಾಸಿ ತ್ರಿತಾಯ ಸೀಟ್ ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಗುರುವಾರ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಮಾಜಿ ಬಿಜೆಪಿ ಶಾಸಕ ಕುಲದೀಪ್ ಪತ್ನಿಯ ಹೆಸರು ಪಟ್ಟಿಯಲ್ಲಿದೆ.
ಕುಲದೀಪ್ ಸಿಂಗ್ ಮಾಜಿ ಬಿಜೆಪಿ ಶಾಸಕನಾಗಿದ್ದು, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಪಕ್ಷದಿಂದ ಹೊರಹಾಕಲಾಗಿದೆ. ಉತ್ತರಪ್ರದೇಶ ವಿಧಾನಸಭೆತಯ ಸದಸ್ವತ್ವದಿಂದ ಅನರ್ಹಗೊಳಿಸಲಾಗಿದೆ.
ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದಂತೆ 2020ರಲ್ಲಿ ಸಿಂಗ್ ಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ.ದಂಡ ವಿಧಿಸಲಾಗಿತ್ತು. 2017ರಲ್ಲಿ ಉನ್ನಾವೊದಲ್ಲಿ ಅಪ್ರಾಪ್ತೆಯ ಅತ್ಯಾಚಾರ ನಡೆಸಿದ್ದಕ್ಕೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಉತ್ತರಪ್ರದೇಶ ಪಂಚಾಯತ್ ಚುನಾವಣೆ 2021ರ ಎಪ್ರಿಲ್ 15ರಿಂದ 4 ಹಂತಗಳಲ್ಲಿ ನಡೆಸಲಾಗುವುದು. ಫಲಿತಾಂಶವನ್ನು ಮೇ 2ರಂದು ಪ್ರಕಟಿಸಲಾಗುತ್ತದೆ.