ಜಾತಿ, ಧರ್ಮಗಳನ್ನು ಮೀರಿದ 40 ವರ್ಷಗಳ ಸ್ನೇಹಿತರು ಸಾವಿನಲ್ಲೂ ಒಂದಾದರು!
ಜೈಲಬುದ್ದೀನ್ ಮೃತಪಟ್ಟ ಅರ್ಧ ಗಂಟೆಯಲ್ಲೇ ಗೆಳೆಯನ ಹಾದಿ ಹಿಡಿದ ಮಹಾಲಿಂಗಂ

photo: newindianexpress.com
ತಿರುಚ್ಚಿ: ಕೆ.ಮಹಾಲಿಂಗಂ (70) ಹಾಗೂ ಪಿ ಜೈಲಬುದ್ದೀನ್(66) ಕಳೆದ ನಾಲ್ಕು ದಶಕಗಳಿಂದಲೂ ಪ್ರಾಣಸ್ನೇಹಿತರು. ಜಾತಿ, ಧರ್ಮ, ವೃತ್ತಿಗಳ ಎಲ್ಲೆ ದಾಟಿದ್ದ ಈ ಅಪರೂಪದ ಸ್ನೇಹಿತರು ಇತ್ತೀಚೆಗೆ ಸಾವಿನಲ್ಲೂ ಒಂದಾಗಿದ್ದಾರೆ. ಮಂಗಳವಾರ ಸಂಜೆ ಇಬ್ಬರೂ ಕೇವಲ 30 ನಿಮಿಷಗಳ ಅಂತರದಲ್ಲಿ ನಿಧನರಾಗಿದ್ದಾರೆ.
ಬುಧವಾರ ಅವರ ಊರಾದ ಅರಿಯಳೂರಿನ ಜಯನಕೊಂಡಮ್ ಪಟ್ಟಣದ ಈ ಇಬ್ಬರು ಸ್ನೇಹಿತರ ಕುಟುಂಬಿಕರು ಅಲ್ಲಿನ ಜುಬಿಲೀ ರಸ್ತೆಯಲ್ಲಿ ಅಗಲಿದ ಈ ಪ್ರಾಣಸ್ನೇಹಿತರಿಗೆ ಶ್ರದ್ಧಾಂಜಲಿ ಸಲ್ಲಿಸುವ ದೊಡ್ಡ ಬ್ಯಾನರ್ ಹಾಕಿದ್ದಾರೆ.
ಮಹಾಲಿಂಗಂ ಅವರು ಪಟ್ಟಣದ ವೃದ್ಧಾಚಲಂ ರಸ್ತೆಯಲ್ಲಿರುವ ಮಾರಿಯಮ್ಮನ್ ದೇವಳದ ಅರ್ಚಕರಾಗಿದ್ದರಲ್ಲದೆ ದೇವಳದ ಹತ್ತಿರದಲ್ಲಿಯೇ ಒಂದು ಟೀಸ್ಟಾಲ್ ಕೂಡ ನಡೆಸುತ್ತಿದ್ದರು. ಜೈಲಬುದ್ದೀನ್ ಅವರು ಅಕ್ಕಿ ಮಿಲ್ ಮಾಲಕರಾಗಿದ್ದರಲ್ಲದೆ ಜುಬಿಲಿ ರಸ್ತೆಯಲ್ಲಿ ಮಹಾಲಿಂಗಂ ಮನೆಯೆದುರಿನ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಪರಸ್ಪರ ಮಾಮಾ-ಮಾಪ್ಲಾ (ಆತ್ಮೀಯ ಸ್ನೇಹಿತರು ಬಳಸುವ ಪದ) ಎಂದು ಸಂಬೋಧಿಸುತ್ತಿದ್ದರು
ಅರ್ಚಕರಾಗಿದ್ದ ಮಹಾಲಿಂಗಂ ಹಿಂದು ಧಾರ್ಮಿಕ ವಿಧಿ ವಿಧಾನಗಳಲ್ಲಿ ಅತೀವ ನಂಬಿಕೆಯಿರಿಸಿದವರಾಗಿದ್ದರೆ ಜೈಲಬುದ್ದೀನ್ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದರು.
"ನಮ್ಮ ಮನೆಯಲ್ಲಿ ಯಾವುದೇ ಸಮಾರಂಭ ಅಥವಾ ಹಬ್ಬ ಜೈಲಬುದ್ದೀನ್ ತಾತಾ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರಲಿಲ್ಲ. ಇಬ್ಬರೂ ಚಿಕ್ಕಂದಿನಿಂದಲೂ ದೋಸ್ತಿಗಳಾಗಿದ್ದರೆಂದು ನಮಗೆ ತಿಳಿದಿದೆ" ಎಂದು ಮಹಾಲಿಂಗಂ ಅವರ ಮೊಮ್ಮಗ ಎಸ್ ಗುರು ಹೇಳುತ್ತಾರೆ.
"ಯಾವುದೇ ಸಮಾರಂಭ ನಡೆಸಲಿದ್ದರೂ ಮಹಾಲಿಂಗಂ ತಾತಾ ಅವರ ಸಲಹೆ ಕೇಳುತ್ತಿದ್ದೆವು. ಅವರಿಬ್ಬರೂ ಜತೆಯಾಗಿದ್ದಾಗ ಫೋಟೋ ಇರಬೇಕಿತ್ತೆಂದು ಅನಿಸುತ್ತದೆ. ಅವರ ಸಾವು ಅನಿರೀಕ್ಷಿತ" ಎಂದು ಜೈಲಬುದ್ದೀನ್ ಅವರ ಮೊಮ್ಮಗ ಅಬ್ದುಲ್ ರಶೀದ್ ಹೇಳುತ್ತಾರೆ.
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಮಹಾಲಿಂಗಂ ಮಂಗಳವಾರ ಅನಾರೋಗ್ಯಕ್ಕಿಡಾಗಿದ್ದರು. ಅವರನ್ನು ಕುಟುಂಬ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತು. ಜೈಲಬುದ್ದೀನ್ ಕೂಡ ಅನಾರೋಗ್ಯಕ್ಕೀಡಾಗಿ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ಮಹಾಲಿಂಗಂ ಅವರ ಕುಟುಂಬಕ್ಕೆ ಅಲ್ಲಿಗೆ ಹೋದಾಗಲಷ್ಟೇ ತಿಳಿದು ಬಂದಿತ್ತು. ವೈದ್ಯರ ಸಲಹೆಯಂತೆ ಇಬ್ಬರನ್ನೂ ಜಯನಕೊಂಡಮ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಜೈಲಬುದ್ದೀನ್ ಅವರಿಗೆ ಎದೆ ನೋವು ಕಾಣಿಸಿಕೊಂಡು ಅವರು ಪ್ರಜ್ಞೆ ತಪ್ಪಿ ನಂತರ ಸಂಜೆ 4 ಗಂಟೆಗೆ ನಿಧನರಾದರು. ಮಹಾಲಿಂಗಂ ಅವರಿಗೆ ತಮ್ಮ ಸ್ನೇಹಿತನ ಸಾವಿನ ಸುದ್ದಿ ತಿಳಿಸಿದಾಗ ಅವರ ಕಣ್ಣಾಲಿಗಳಲ್ಲಿ ನೀರು ಜಿನುಗಿತ್ತು ಹಾಗೂ ಅರ್ಧ ಗಂಟೆಯೊಳಗೆ ಅವರೂ ಇಹಲೋಕ ತ್ಯಜಿಸಿದರು. ಮಹಾಲಿಂಗಂ ಅವರ ಅಂತ್ಯಕ್ರಿಯೆ ಪಟ್ಟಣದ ರುದ್ರಭೂಮಿಯಲ್ಲಿ ನಡೆದರೆ ಜೈಲಬುದ್ದೀನ್ ಅವರ ದಫನ ಕಾರ್ಯ ಪಟ್ಟಣದ ಹೊರವಲಯದ ದಫನಭೂಮಿಯಲ್ಲಿ ನೆರವೇರಿತು.