ಅಸ್ಸಾಂ: ರಾತ್ರಿ ವೇಳೆ ಅಂಚೆ ಮತಪತ್ರಗಳನ್ನು ಸಾಗಿಸುತ್ತಿದ್ದ ಇಬ್ಬರ ವಿರುದ್ಧ ತನಿಖೆಗೆ ಆದೇಶ

ಗುವಾಹಟಿ,ಎ.1: ಚುನಾವಣಾ ಆಯೋಗದ ಗುರುತುಪತ್ರಗಳನ್ನು ಹೊಂದಿರುವ ಇಬ್ಬರು ಅಂಚೆಮತಪತ್ರಗಳೆಂದು ನಂಬಲಾದ ಕಾಗದಗಳ ಕಂತೆಗಳನ್ನು ಒಯ್ಯುತ್ತಿರುವ ವಿಡಿಯೋವೊಂದು ಆಸ್ಸಾಂನಲ್ಲಿ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ವಾಗಿದ್ದು, ಭಾರೀ ವೈರಲ್ ಆಗಿದೆ. ಸಿಲ್ಚಾರ್‌ನಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಸ್ಥಳೀಯರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ತನಿಖೆಗೆ ಆದೇಶಿಸಿದೆ.
ಅಸ್ಸಾಂನ ಬರಾಕ್ ಕಣಿವೆ ಪ್ರಾಂತದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸ ಲಾಗಿದೆಯನ್ನಲಾಗಿದೆ. ಆ ವಿಡಿಯೋದಲ್ಲಿ ಸ್ಥಳೀಯರು ಇರುಳಿನ ಮರೆಯಲ್ಲಿ ಅಂಚೆಮತಪತ್ರಗಳ ಹಾಗೆ ಕಾಣುವ ಪತ್ರಗಳ ಕಂತೆಯನ್ನು ಹೊಂದಿರುವ ವ್ಯಕ್ತಿಯನ್ನು ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಈ ಘಟನೆಯು ಸಿಲ್ಚಾರ್‌ನ ಜಿಲ್ಲಾ ಕೇಂದ್ರವಾದ ಕಚಾರ್ ಪಟ್ಟಣದಲ್ಲಿ ನಡೆದಿದೆ.
ಜಿಲ್ಲಾಡಳಿತವು ಘಟನೆಯನ್ನು ಗಂಭೀರವಾಗಿ ಗಮನಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆಯನ್ನು ಆರಂಭಿಸಿದೆ.
ಶಂಕಿತ ಅಂಚೆಮತಪತ್ರಗಳನ್ನು ಒಯ್ಯುತ್ತಿರುವ ವ್ಯಕ್ತಿಗಳನ್ನು ಅಡ್ಡಗಟ್ಟಿ, ಆತನನ್ನು ಪ್ರಶ್ನಿಸಿದರು. ಆದರೆ ಅವರು ಪ್ರಶ್ನೆಗಳಿಗೆ ಉತ್ತರಿಸದೆ, ಪರಾರಿಯಾಗಲು ಯತ್ನಿಸಿದರು. ಈ ಬಗ್ಗೆ ಸ್ಥಳೀಯರು ಪೊಲೀಸರು ಮಾಹಿತಿ ನೀಡಿದ್ದರು.
ಶಂಕಿತ ಅಧಿಕಾರಿಗಳು ವಿಡಿಯೋದಲ್ಲಿ ತಮ್ಮ ನ್ನು ಬಿಶ್ವಜಿತ್ ದೇ ಪುರಕಾಯಸ್ಥ ಹಾಗೂ ದೀಪಕ್ ಗೋಸ್ವಾಮಿ ಎಂದು ಗುರುತಿಸಿಕೊಂಡಿದ್ದಾರೆ. ತಾವು ಮತದಾರನೊಬ್ಬನ ನಿವಾಸಕ್ಕೆ ಆಕಸ್ಮಿಕವಾಗಿ ಕಳುಹಿಸಲಾಗಿದ್ದ ಮತಪತ್ರವನ್ನು ಮರಳಿ ಪಡೆಯಲು ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.
ಸಿಲ್ಚಾರ್‌ನ ಮೌಲವಿ ರಸ್ತೆ ನಿವಾಸಿ ಸಬ್ಯಸಾಚಿ ದತ್ತಾ ಎಂಬವರ ನಿವಾಸಕ್ಕೆ ಆಕಸ್ಮಿಕವಾಗಿ ಮತಪತ್ರವೊಂದನ್ನು ಅಧಿಕಾರಿಗಳಕಳುಹಿಸಿದ್ದರು. ಆದರೆ ಎಪ್ರಿಲ್ 1ರಂದು ಆತ ಇತರ ಸಾಮಾನ್ಯ ನಾಗರಿಕರ ಹಾಗೆ ಮತಚಲಾಯಿಸಲು ಮತಗಟ್ಟೆಗೆ ತೆರಳಿದ್ದರು. ಈಗಾಗಲೇ ಈತ ಮತಚಲಾಯಿಸಿರುವುದರಿಂದ ತನಿಖೆಗೆ ನೀಡಲಾಗಿರುವ ಮತಪತ್ರವು ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಅದನ್ನು ಮರಳಿ ಪಡೆಯಲು ನಾವು ಅಲ್ಲಿಗೆ ಆಗಮಿಸಿದ್ದೆವು ಎಂದು ಬಿಶ್ವಜಿತ್ ದೇವ್ ಪುರಕಾಯಸ್ಥ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸಿದೆ.