ಶನಿವಾರ ರಾತ್ರಿಯಿಂದ 'ಕೊರೋನ ಕರ್ಫ್ಯೂ': ಯಾವುದಕ್ಕೆ ಅವಕಾಶ ? ಯಾವುದಕ್ಕೆ ನಿರ್ಬಂಧ ?
ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ. 9: ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು ಸೇರಿ ರಾಜ್ಯದ ಏಳು ಜಿಲ್ಲಾ ಕೇಂದ್ರಗಳು ಸೇರಿದಂತೆ ಎಂಟು ನಗರಗಳಲ್ಲಿ `ಕೊರೋನ ನೈಟ್ ಕರ್ಫ್ಯೂ' ಇಂದು (ಎ.10) ರಾತ್ರಿಯಿಂದ ಜಾರಿಗೆ ಬರಲಿದ್ದು, ಮಾರ್ಗಸೂಚಿ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ನೈಟ್ ಕರ್ಫ್ಯೂ ಆದೇಶ ಹೊರಡಿಸಿದ್ದು, ಎ.10ರಿಂದ 20ರ ವರೆಗೆ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ, ಬೀದರ್, ಕಲಬುರಗಿ, ತುಮಕೂರಿನಲ್ಲಿ ಕೊರೋನ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10ಗಂಟೆಯಿಂದ ಬೆಳಗಿನಜಾವ 5 ಗಂಟೆಯ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಉಳಿದಂತೆ ಎಲ್ಲ ಸೇವೆಗಳು/ಸಂಚಾರಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ಅಭಾದಿತ ಸೇವೆ: ಅನಾರೋಗ್ಯದಿಂದ ಬಳಲುವರರಿಗೆ, ಅವರ ಸಹಾಯಕರಿಗೆ ಸಂಚಾರಕ್ಕೆ ಅವಕಾಶ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವಂತಹ ಎಲ್ಲ ಕಾರ್ಖಾನೆಗಳು/ ಕಂಪೆನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕೊರೋನ ನೈಟ್ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರತಕ್ಕದ್ದು. ವೈದ್ಯಕೀಯ ಮತ್ತು ತುರ್ತು ಚಟುವಟಿಕೆಗಳಿಗೆ ಅವಕಾಶ.
ನಿರ್ಬಂಧ: ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಅತ್ಯವಶ್ಯಕ ಸೇವೆ ಒದಗಿಸುವ ವಾಹನಗಳು, ಸರಕು ಸಾಗಣೆ ವಾಹನಗಳು, ಹೋಂ ಡೆಲಿವರಿ ವಾಹನಗಳು, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ. ಬಸ್ಸು, ರೈಲು, ವಿಮಾನಗಳ ದೂರ ಪ್ರಯಾಣಕ್ಕೆ ಅವಕಾಶ. ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಹೋಗಲು ಅಧಿಕೃತ ಟಿಕೆಟ್ಗಳ ಆಧಾರದ ಮೇಲೆ ಆಟೋ, ಕ್ಯಾಬ್ ಬಳಕೆಗೆ ಅವಕಾಶನೀಡಲಾಗಿದೆ.
ಅಧಿಕಾರಿಗಳಿಗೆ ಹೊಣೆ
ಕೊರೋನ ನೈಟ್ ಕರ್ಫ್ಯೂ ಆದೇಶವನ್ನು ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಮೈಸೂರು, ಕಲಬುರಗಿ, ಮಂಗಳೂರು ಸೇರಿದಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸತಕ್ಕದ್ದು. ಆದೇಶ ಪಾಲನೆಯಲ್ಲಿ ಲೋಪವೆಸಗುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿಸ ಕ್ರಮ ಕೈಗೊಳ್ಳತಕ್ಕದ್ದು
-ಪಿ.ರವಿಕುಮಾರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ







