ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕೆಟ್ಟುನಿಂತ 9 ಲಕ್ಷ ಕೋವಿಶೀಲ್ಡ್ ಲಸಿಕೆ ಹೊತ್ತ ವಾಹನ!

photo: ANI
9 ಲಕ್ಷ ಕೋವಿಶೀಲ್ಡ್ ಲಸಿಕೆಗಳಿದ್ದ ವಾಹನ ನಿಷ್ಕ್ರಿಯ: ಅಧಿಕಾರಿಗಳು ಕೆಲ ಹೊತ್ತು ಕಂಗಾಲು
ಪಾಟ್ನಾ,ಮಾ.5: ದೇಶದಲ್ಲಿ ಕೊರೋನ-19 ಸೋಂಕಿನ ಪ್ರಕರಣಗಳಲ್ಲಿ ತೀವ್ರ ಏರಿಕೆ ಹಾಗೂ ಕೊರೋನ ಲಸಿಕೆಯ ದಾಸ್ತಾನುಗಳು ಕರಗುತ್ತಿರುವಂತೆಯೇ ಪಾಟ್ನಾ ವಿಮಾನನಿಲ್ದಾಣದಲ್ಲಿ, ಕೋವಿಶಿಲ್ಡ್ ಲಸಿಕೆಯಿರುವ ಸೀಸೆಗಳನ್ನು ನಳಂದಾ ಮೆಡಿಕಲ್ ಕಾಲೇಜ್ ಆಸ್ಪತ್ರೆ (ಎನ್ಎಂಸಿಎಚ್)ಗೆ ಸಾಗಿಸುತ್ತಿದ್ದ ಸಾರಿಗೆ ವಾಹನವೊಂದು ವಿಮಾನನಿಲ್ದಾಣದಿಂದ ನಿರ್ಗಮಿಸಿದ ಕೆಲವೇ ಕ್ಷಣದಲ್ಲಿ ಕೆಟ್ಟುಹೋಗಿ, ಸಿಬ್ಬಂದಿ ಅಧಿಕಾರಿಗಳು ಕೆಲವು ಹೊತ್ತು ಪೇಚಿಗೀಡಾದ ಘಟನೆ ಶನಿವಾರ ವರದಿಯಾಗಿದೆ.
‘ವ್ಯಾಕ್ಸಿನ್ ಎಕ್ಸ್ಪ್ರೆಸ್’ ಎಂಬ ಹೆಸರಿನ ಈ ವಿಶೇಷ ವಾಹನವು 9 ಲಕ್ಷ ಡೋಸ್ಗಳನ್ನು ಒಯ್ಯುತ್ತಿದ್ದುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಅದರ ಬ್ಯಾಟರಿ ಕೆಟ್ಟು ಹೋಗಿ, ರಾಜ್ಯ ಆರೋಗ್ಯ ಇಲಾಖೆಯ ಉದ್ಯೋಗಿಗಳು ಇರಿಸುಮುರಿಸುಗೊಳ್ಳುವಂತೆ ಮಾಡಿತು.
‘‘ ವ್ಯಾನ್ 89,689 ಲಸಿಕೆಗಳನ್ನು ಒಯ್ಯುತ್ತಿತ್ತು. ಪ್ರತಿಯೊಂದು ಸೀಸೆಯು 10 ಡೋಸ್ಗಳನ್ನು ಹೊಂದಿದ್ದಾಗಿ ಸರಕಿನ ಜೊತೆಗಿದ್ದ ಫಾರ್ಮಾಸಿಸ್ಟ್ ಮುಕೇಶ್ ಕುಮಾರ್ ತಿಳಿಸಿದ್ದಾರೆ.
ವ್ಯಾನ್ಸಿಬ್ಬಂದಿಯ ಮನವಿಯಂತೆ ವಿಮಾನನಿಲ್ದಾಣದ ಆವರಣದಲ್ಲಿದ್ದ ಕೆಲವು ಸಾರ್ವಜನಿಕರು ಶೀಥಲೀಕೃತ ವಾಹನವನ್ನು ಕೆಲವು ದೂರ ತಳ್ಳಿದ್ದರಿಂದ ವ್ಯಾನ್ಗೆ ಮತ್ತೆ ಜೀವಬಂದಿತ್ತು
ಬಿಹಾರ ರಾಜ್ಯವೊಂದರಲ್ಲೇ 1900ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು ನಾಲ್ವರು ಸಾವನ್ನಪ್ಪಿದ್ದರು. ರಾಜ್ಯದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ ಈಗ 2,73,830ಕ್ಕೆ ತಲುಪಿದ್ದು 1600 ಮಂದಿ ಸಾವನ್ನಪ್ಪಿದ್ದಾರೆ. 2020ರ ಜನವರಿಯಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಕೊರೋನ ಪ್ರಕರಣ ವರದಿಯಾಗಿತ್ತು.