ಪುಸ್ತಕ ಪೂರೈಕೆ, ವಾಹನ ದುರಸ್ತಿಯಲ್ಲಿ ಬಿಇಓ ಮಂಜುಳಾ ಅವ್ಯವಹಾರ: ಸುಂದರ್ ಮಾಸ್ತರ್ ಆರೋಪ

ಉಡುಪಿ, ಎ.9: ಕರ್ತವ್ಯಲೋಪದಿಂದ ಅಮಾನತುಗೊಂಡಿರುವ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಶಾಲೆಗಳಿಗೆ ಪುಸ್ತಕ, ಸಮವಸ್ತ್ರ ಪೂರೈಕೆ ವೆಚ್ಚ, ವಾಹನ ದುರಸ್ತಿ ಹಾಗೂ ಡಿಸೇಲ್ ಹಣದಲ್ಲಿ ಅವ್ಯವಹಾರ ಎಸಗಿದ್ದಾರೆ. ದಲಿತ ವಿರೋಧಿ ಅಧಿಕಾರಿಯಾಗಿರುವ ಇವರು, ತಮ್ಮ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಹಾಕಿದ್ದಾರೆ ಎಂದು ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸುಂದರ್ ಮಾಸ್ತರ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುಳಾ ನನ್ನ ವಿರುದ್ಧ ಪೂರ್ವಗ್ರಾಹ ಪೀಡಿತರಾಗಿ ಹೆಸರಿಲ್ಲದ ಅರ್ಜಿಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿ ಸುಳ್ಳು ಆರೋಪ ಹೊರೆಸಿದ್ದರು. ದಾಖಲೆಯಲ್ಲಿ ನನ್ನನ್ನು ಮುಖ್ಯಶಿಕ್ಷಕ ಎಂಬುದಾಗಿ ನಮೂದಿಸುವ ಬದಲು ದಸಂಸ ಮುಖಂಡ ಎಂಬುದಾಗಿ ನಮೂದಿಸಿರುವುದು ಖಂಡನೀಯ. ಅವರ ವಿರುದ್ಧ ಮಾನನಷ್ಟ ಮೊಕದ್ದವೆು ಹೂಡಲು ನಿರ್ಧರಿಸಿದ್ದೇನೆ ಎಂದರು.
ಮಂಜುಳಾ ಹಾಗೂ ಇಲಾಖೆಯ ಅಧೀಕ್ಷಕಿ ಶಾರೀಕಾ, ನನ್ನ ಪಿಂಚಣಿ ಸೌಲಭ್ಯವನ್ನು ತಡೆಹಿಡಿಯುವಂತೆ ಮಾಡಿ ಕಿರುಕುಳ ನೀಡುತ್ತಿರುವುದಲ್ಲದೆ, ಪಿಂಚಣಿ ಸೌಲಭ್ಯ ಸಿಗಬೇಕಾದರೆ ನಮಗೆ 50ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ 2019ರ ಡಿ.31ರಂದು ಉಡುಪಿ ಜಿಪಂ ಸಿಇಓಗೆ ದೂರು ನೀಡಿದ್ದೇನು. ಅಲ್ಲದೆ ಇವರು ಪಂಚನಬೆಟ್ಟು ಅನುದಾನಿತ ಶಾಲೆಯನ್ನು ದುರುದ್ದೇಶದೊಂದಿಗೆ ಮುಚ್ಚಲು ಪ್ರಯತ್ನ ಮಾಡಿದ್ದರು. ಇದೀಗ ಇವರನ್ನು ಅಮಾನತುಗೊಳಿಸಿರುವುದು ನ್ಯಾಯಬದ್ಧವಾಗಿದೆ ಎಂದು ಅವರು ಹೇಳಿದರು.
ಶಾಲೆಗಳಿಗೆ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಪೂರೈಕೆ ಮಾಡಲು ಬಂದ ಹಣವನ್ನು ತಮ್ಮ ಸ್ವಂತ ಬಳಕೆಗೆ ಉಪಯೋಗಿಸಿದ್ದಾರೆ. ಕಚೇರಿ ವಾಹನಕ್ಕೆ ಚಾಲಕ ಇಲ್ಲದಿದ್ದರೂ ಖಾಸಗಿ ವ್ಯಕ್ತಿಯ ಮೂಲಕ ವಾಹನವನ್ನು ಸುಮಾರು 5 ಸಾವಿರ ಕಿ.ಮೀ. ಓಡಿಸಿದ್ದಾರೆ. ಈ ವಾಹನದ ದುರಸ್ತಿಗೆ ಇಲಾಖೆ ಅನುಮತಿ ಪಡೆಯದೆ 96,000ರೂ. ಹಾಗೂ ಡೀಸೆಲ್‌ಗೆ 67,000ರೂ. ಖರ್ಚು ಮಾಡುವ ಮೂಲಕ ಇವರು ಭ್ರಷ್ಟಾಚಾರ ಎಸಗಿದ್ದಾರೆ. ಶಿವಮೊಗ್ಗ ಮೂಲದ ಇವರಿಗೆ ಶಿವಮೊಗ್ಗದ ಸಚಿವರೊಬ್ಬರ ಬೆಂಬಲ ಇದೆ ಎಂದು ಅವರು ಆರೋಪಿಸಿದರು.







